
ಸುಲ್ತಾನ್ಪುರ್ (ಉತ್ತರಪ್ರದೇಶ): ದೇಶದಲ್ಲಿಯೇ ಅತೀ ಉದ್ದದ ಎಕ್ಸ್‌ಪ್ರೆಸ್ ಮಾರ್ಗ ಉತ್ತರಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Purvanchal Expressway) ಉದ್ಘಾಟನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ಸುಲ್ತಾನ್ಪುರ್ದಲ್ಲಿ ನಿರ್ಮಾಣವಾಗಿರುವ 340 ಕಿಲೋಮೀಟರ್ ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಗೋಸ್ಕರ 22,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಿ ಮೋದಿ ಅದರ ಉದ್ಘಾಟನೆ ಮಾಡಿದರು.
ಸುಮಾರು 1 ಗಂಟೆಗೂ ಅಧಿಕ ಕಾಲ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(PM Narendra Modi), ಉತ್ತರ ಪ್ರದೇಶ ಹಿಂದುಳಿಯಲು ಈ ಹಿಂದೆ ಆಡಳಿತ ನಡೆಸಿರುವ ಸರ್ಕಾರಗಳು ನೇರವಾಗಿ ಕಾರಣವಾಗಿವೆ.ಹಿಂದಿನ ಸರ್ಕಾರಗಳು ಉತ್ತರ ಪ್ರದೇಶದ ಅಭಿವೃದ್ಧಿಯತ್ತ ಗಮನ ಹರಿಸಿರಲಿಲ್ಲ. ಕುಟುಂಬ ರಾಜಕಾರಣದಿಂದಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದ್ದವು ಎಂದರು.
ಉತ್ತರಪ್ರದೇಶ ಹಾಗೂ ಇಲ್ಲಿನ ಜನರ ಸಾಮರ್ಥ್ಯದ ಮೇಲೆ ಅನುಮಾನ ಇರುವವರು ಸುಲ್ತಾನ್ಪುರಕ್ಕೆ ಬರಲಿ. ಈ ಜನರ ಸಾಮರ್ಥ್ಯ ಏನು ಎಂಬುದು ಅರ್ಥವಾಗಲಿದೆ. ಕಳೆದ 3-4 ವರ್ಷಗಳ ಹಿಂದೆ ಕೇವಲ ಒಂದು ತುಂಡು ಭೂಮಿಯಾಗಿದ್ದ ಈ ಸ್ಥಳದಲ್ಲಿ ಇದೀಗ ಆಧುನಿಕ ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗಿದೆ ಎಂದರು.
ಕಳೆದ ಮೂರು ವರ್ಷಗಳ ಹಿಂದೆ ಪೂರ್ವಾಂಚಲ ಎಕ್ಸ್‌ಪ್ರೆಸ್ ವೇಗೆ ಶಂಕು ಸ್ಥಾಪನೆ ಮಾಡಿದಾಗ, ನಾನು ಮುಂದೊಂದು ದಿನ ವಿಮಾನದಲ್ಲಿ ಇಲ್ಲಿಗೆ ಬಂದು ಇಳಿಯುತ್ತೇನೆ ಎಂದು ಯೋಚನೆ ಮಾಡಿರಲಿಲ್ಲ. ಆದರೆ, ಈ ಎಕ್ಸ್‌ಪ್ರೆಸ್ ವೇ ಉತ್ತರಪ್ರದೇಶ ಆಧುನೀಕರಣ ಮುಖದ ಪ್ರತಿಬಿಂಬವಾಗಿದೆ. ಇಲ್ಲಿನ ಸಾಧನೆಗೆ ಜೀವಂತ ಸಾಕ್ಷಿಯಾಗಿದೆ ಎಂದರು.
ಪೂರ್ವಾಂಚಲ ಎಕ್ಸ್‌ಪ್ರೆಸ್ ವೇಗೆ ವಾಯುಪಡೆಯ ಸಿ-130 ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಬಂದಿಳಿದ ನಮೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದರು. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸಹ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

