ಬೆಂಗಳೂರು: ಕಾರ್ಯತಂತ್ರ ರೂಪಿಸಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಈ ಬಗ್ಗೆ ಚರ್ಚಿಸಲು ಇದೇ 25ರಂದು ದೆಹಲಿಗೆ ಬರುವಂತೆ ಪಕ್ಷದ ರಾಜ್ಯ ಮುಖಂಡರಿಗೆ ಆಹ್ವಾನ ನೀಡಿದೆ.
25ರಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರಿಗೆ ಸಭೆಗೆ ಬರುವಂತೆ ಆಹ್ವಾನ ಬಂದಿದೆ. ಪಕ್ಷದ ಕಾರ್ಯಾಧ್ಯಕ್ಷರು, ಇತರ ಹಿರಿಯ ನಾಯಕರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ನಾನು ಪಕ್ಷದ ಅಧ್ಯಕ್ಷನಾದ ಸಮಯದಲ್ಲೇ ಪಕ್ಷದ ಎಲ್ಲ ನಾಯಕರನ್ನು ಕರೆದುಕೊಂಡು ದೆಹಲಿಯಲ್ಲಿ ಹೈಕಮಾಂಡ್ ಜತೆ ಚರ್ಚೆ ಮಾಡಬೇಕು ಎಂದು ಸಮಯ ಕೇಳಿದ್ದೆ. ಅಧ್ಯಕ್ಷನಾದ ಬಳಿಕ ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕರೆದು ಪಕ್ಷ ಹೇಗೆ ಕೆಲಸ ಮಾಡಬೇಕು ಎಂಬ ವಿಚಾರವಾಗಿ ವರಿಷ್ಠರು ಚರ್ಚಿಸಿದ್ದರು. ಈಗ ಎಲ್ಲ ನಾಯಕರಿಂದ ಅಭಿಪ್ರಾಯ ಪಡೆಯಲು ಆಹ್ವಾನಿಸಿದ್ದಾರೆ. ನಮ್ಮ ಶಾಸಕರು, ಕಾರ್ಯಕರ್ತರಿಗೆ ಪಕ್ಷದ ವಿಚಾರಗಳ ಬಗ್ಗೆ ತರಬೇತಿ ನೀಡಬೇಕಾಗಿದೆ’ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

