ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯಿತಿದ್ದು ಬೆಣ್ಣೆ ಹಾಗೂ ತುಪ್ಪರಿ ಹಳ್ಳಗಳು ತುಂಬಿ ತುಳುಕಿದರೆ ಜನಜೀವನ ಅಸ್ತವ್ಯಸ್ತವಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಅಣ್ಣೆಗೇರಿ ,ಅಳ್ನಾವರ ಸೇರಿದಂತೆ ಎಲ್ಲಡೆ ಭಾರೀ ಮಳೆ ಸುರಿದು ಜಮೀನುಗಳು ಜಲಾವೃತವಾಗುವುದರೊಂದಿಗೆ ಬೆಳೆದ ಪೈರುಗಳು ನಾಶವಾಗಿವೆ. ಬಹುತೇಕ ಕಡೆಗಳಲ್ಲಿ ಮನೆಗಳಿಗೂ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.
ವ್ಯಾಪಕ ಮಳೆಯಿಂದ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಬರುತ್ತಿದ್ದು, ಈ ಭಾಗದಲ್ಲಿ ಬಹಳಷ್ಟು ಹಳ್ಳಿಗಳಿಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ಬಹುತೇಕ ಹಳ್ಳ, ಸರುವುಗಳು ಭರ್ತಿಯಾಗಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿ ಸುರಿದ ಘಣ ಘೋರ ಮಳೆಗೆ ಬೆಣ್ಣೆ ಹಳ್ಳದ ದಡದ ಗ್ರಾಮಗಳಿಗೆ ಅಕ್ಷರಶ: ಜಲಗಂಡಾಂತರ ಎದುರಾಗಿತ್ತು. ನವಲಗುಂದ ತಾಲೂಕಿನ ಶಿರಕೋಳ, ಮೊರಬ, ಹನಸಿ, ಅಳಗವಾಡಿ, ಜಾವೂರು, ತಿರ್ಲಾಪುರ ಕನ್ನೂರ, ಶಲವಡಿ, ಅಣ್ಣಿಗೇರಿ ತಾಲೂಕಿನ ಮಣಕವಾಡ, ಇಂಗಲಹಳ್ಳಿ, ಶಿಶ್ವಿನಹಳ್ಳಿ ಗ್ರಾಮಗಳಲ್ಲಿ ಸಂಪರ್ಕ ಸಹ ಕಡಿತಗೊಂಡಿವೆ ಇನ್ನು ಅಣ್ಣಿಗೇರಿ ತಾಲೂಕಿನ ಖನ್ನೂರು ಗ್ರಾಮದ ಬಳಿ ಕಳೆದ ಮಳೆಗೆ ಸೇತುವೊಂದು ಕುಸಿದು ಹೋಗಿದ್ದು ಕೂದಲೆಳೆ ಅಂತರದಲ್ಲಿ ಹಳ್ಳ ವೀಕ್ಷಿಸಲು ತೆರಳಿದ್ದವರು ಪಾರಾದ ಘಟನೆ ಮಾಸುವ ಮುನ್ನವೇ ಅನಾಹುತಕ್ಕೆ ಅನೇಕ ಘಟನೆಗಳು ಎಡೆ ಮಾಡಿಕೊಡುವುದರಲ್ಲಿ ಸಂದೇಹವಿಲ್ಲ. ಹುಬ್ಬಳ್ಳಿ ತಾಲೂಕಿನ ಹಳಿಯ್ಯಾಳ ಕಡಪಟ್ಟಿ ಗ್ರಾಮದ ಬಳಿ ಬೆಣ್ಣಿಹಳ್ಳದ ಪ್ರವಾಹ ಹೆಚ್ಚುತಿದ್ದು ಜನರು ಭಯದಲ್ಲಿಯೇ ಇದ್ದಾರೆ.
ನವಲಗುಂದ ತಾಲೂಕಿನ ಬೊಗಾನೂರು ಗ್ರಾಮದಲ್ಲಿ ದೊಡ್ಡ ಹಂದಿಗನಹಳ್ಳ ಮತ್ತೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದರೆ, ತಾಲೂಕಿನ ಖನ್ನೂರ ಗ್ರಾಮದ ಬಳಿ ಸೇತುವೆ ಮುಳುಗಡೆಯಾಗಿದೆ ಸಹಕುಂದಗೋಳ ತಾಲೂಕಿನ ಬೆನಕನಹಳ್ಳಿ ಹಿರೇನರ್ತಿ, ಚಿಕ್ಕನರ್ತಿ, ಯರಗುಪ್ಪಿ , ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಸುಳ್ಳ ಹಾಗೂ ಹೆಬಸೂರು ಗ್ರಾಮಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆನಾಶವಾಗಿದೆ. ಬೆಣ್ಣೆ, ತುಪ್ಪರಿ ಹಾಗೂ ಇರುವೆ ಹಳ್ಳಗಳ ಪಾತ್ರದ ಗ್ರಾಮಗಳ ಸುತ್ತಲಿನ ರಸ್ತೆಗಳು ಬಹುತೇಕ ಹಾಳಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಶೇಂಗಾ ಹತ್ತಿ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ನಡು ನೀರಿನಲ್ಲಿ ನಿಂತಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

