ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಾಯಿ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ಪ್ರೇಮಕ್ಕ ಬಡಿಗೇರ (55) ಹಾಗೂ ಪುತ್ರ ಅವಿನಾಶ್ ಬಡಿಗೇರ (38) ಮೃತರು. ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ಖರೀದಿಸಿದ್ದ ಮನೆ ಮತ್ತು ಜಾಗ ತಮ್ಮ ಹೆಸರಿಗೆ ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ಪ್ರೇಮಕ್ಕ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದ ಮೂಲಕ ಮನೆ ಮತ್ತು ಜಾಗವನ್ನು ಮರಳಿ ವಶಕ್ಕೆ ಪಡೆದಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿಗಳು ತಾಯಿ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆಡೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

