ಬ್ರಿಡ್ಜ್‌ಟೌನ್ (ವೆಸ್ಟ್ ಇಂಡೀಸ್): ಟೆಸ್ಟ್ ಸರಣಿ ಬಳಿಕ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಟೀಮ್ ಇಂಡಿಯಾ ವೈಟ್‌ಬಾಲ್ ಕ್ರಿಕೆಟ್ ಸರಣಿಗಳ ಸಲುವಾಗಿ ತಯಾರಿ ನಡೆಸಿವೆ. ಇತ್ತಂಡಗಳು ಮೊದಲಿಗೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಆಡಲಿದ್ದು, ಪ್ರಥಮ ಹಣಾಹಣಿ ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಜುಲೈ 27ರಂದು (ಗುರುವಾರ) ಜರುಗಲಿದೆ. ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 1-0 ಅಂತರದ ಜಯ ದಾಖಲಿಸಿದ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಇದೀಗ ವೈಟ್‌ವಾಶ್ ಸರಣಿಯಲ್ಲಿ 3-0 ಅಂತರದ ವೈಟ್‌ವಾಶ್ ಜಯ ದಾಖಲಿಸುವ ಫೇವರಿಟ್ ತಂಡವಾಗಿದೆ.
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಮಳೆ ಕಾರಣ ಡ್ರಾ ಫಲಿತಾಂಶ ಕಂಡಿತ್ತು. ಪಂದ್ಯದ ನಾಲ್ಕನೇ ಹಾಗೂ ಐದನೇ ದಿನದಾಟದಲ್ಲಿ ಸುರಿದ ಮಳೆ ಭಾರತದ ಗೆಲುವಿನ ಕನಸಿಗೆ ತಣ್ಣೀರೆರಚಿತ್ತು. ಹೀಗಾಗಿ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯಕ್ಕೂ ಮಳೆ ಕಾಟ ಕೊಡಬಹುದೇ? ಎಂಬ ಸಹಜ ಪ್ರಶ್ನೆ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿದೆ.
ಬಾರ್ಬೆಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಗುರುವಾರ ಉಷ್ಣಾಂಶ ಹೆಚ್ಚಿರಲಿದೆ. ಗರಿಷ್ಠ 32 ಮತ್ತು ಕನಿಷ್ಠ 26 ಡಿಗ್ರಿ ಸೆಲ್ಷಿಯಸ್‌ನಷ್ಟು ಉಷ್ಣಾಂಶ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. ಈ ಪಂದ್ಯಕ್ಕೆ ಮಳೆ ಕಾಟ ಕೊಡುವ ಸಾಧ್ಯತೆ ಶೇ. 7ರಷ್ಟು ಮಾತ್ರವೇ ಇದ್ದು, ರನ್ ಹೊಳೆ ನಿರೀಕ್ಷಿಸಬಹುದಾಗಿದೆ. ಮೋಡ ಮುಚ್ಚಿದ ವಾತಾವರಣ ಇರಲಿದ್ದು, ವೇಗದ ಬೌಲರ್‌ಗಳು ಇದರ ಲಾಭ ಪಡೆಯಬಹುದಾಗಿದೆ. ಅಂದಹಾಗೆ ಕೆರಿಬಿಯನ್ನರ ನಾಡಲ್ಲಿ ಮಳೆ ಮೋಡಗಳಿರುವ ಕಾರಣ ವಹಾಮಾನ ವರದಿಗೆ ವಿರುದ್ಧವಾಗಿ ಪರಿಸ್ಥಿತಿ ಬದಲಾಗುವ ಸಾಧ್ಯತೆಯೂ ಇದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿನ ಕ್ರಿಕೆಟ್ ಸರಣಿಯ ಪಂದ್ಯಗಳು ಟೆಲಿವಿಷನ್‌ನಲ್ಲಿ ಡಿಡಿ ಸ್ಪೋರ್ಟ್ಸ್ ಮೂಲಕ ಪ್ರಸಾರವಾಗಲಿವೆ. ಇನ್ನು ಸ್ಮಾರ್ಟ್ ಫೋನ್ ಬಳಕೆದಾರರು ಒಟಿಟಿ ವೇದಿಕೆಗಳಾದ ಜಿಯೊ ಸಿನಿಮಾ ಮತ್ತು ಫ್ಯಾನ್ ಕೋಡ್ ಅಪ್ಲಿಕೇಷನ್ ಬಳಸಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಪಡೆಯಬಹುದಾಗಿದೆ. ಜಿಯೊ ಸಿನಿಮಾದಲ್ಲಿ ಸ್ಟ್ರೀಮಿಂಗ್ ಉಚಿತವಾಗಿದ್ದು, ಫ್ಯಾನ್ ಕೋಡ್ ಅಪ್ಲಿಕೇಷನ್‌ನಲ್ಲಿ ಹಣ ಪಾವತಿಸಿ ನೋಡಬೇಕಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





