ಬೆಂಗಳೂರು : ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ರಾಜ್ಯಾದ್ಯಂತ ಕನ್ನಡ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ, ರಂಗಕರ್ಮಿ, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದು, ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇಂದು ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನವೆಂಬರ್ 1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಸಾಹಿತಿ, ರಂಗಕರ್ಮಿ ಹಾಗೂ ಹಿರಿಯ ಕಲಾವಿದರ ಸಭೆ ನಡೆಸಲಾಗಿದೆ. ಆ.22ಕ್ಕೆ ಬೆಳಗಾವಿ, ಆ.25 ಮೈಸೂರು ಹಾಗೂ 28ರಂದು ಕಲಬುರಗಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡರಥ ರಾಜ್ಯವಿಡೀ ಸಂಚಾರ ಮಾಡುವುದು, ಶಾಲಾ ಮತ್ತು ಕಾಲೇಜುಗಳಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ, ರಾಜ್ಯದ ಸಿದ್ಧಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು, ಕನ್ನಡದ ಮಾಹಿತಿಯನ್ನೊಳಗೊಂಡ ಸಂಚಾರಿ ವಾಹನ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





