ಬೆಂಗಳೂರು: ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ಸಚಿವರ ಹೇಳಿಕೆಗಳು ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಆರ್.ಟಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಹಾರ ಹೆಚ್ಚಿಗೆ ಮಾಡಿದ್ದರಿಂದ ಹೆಚ್ಚಿನ ಪ್ರಮಾಣದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿರುವುದು ಖಂಡನೀಯ.ಈ ಸರ್ಕಾರ ಬಂದ ಮೇಲೆ ರೈತ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಜೂನ್, ಜುಲೈ ತಿಂಗಳಲ್ಲಿ ಮಳೆ ಆಗಿಲ್ಲ. ಬರಗಾಲ

ಘೋಷಣೆ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. ಬರಗಾಲ ಘೋಷಣೆ ಆದರೆ, ಹೊಸ ಸಾಲ ಕೊಡಬೇಕು, ಬೆಳೆ ಪರಿಹಾರ ನೀಡಬೇಕು ಎಂದು ಹೇಳಿದರು. ರೈತ ದುಡ್ಡಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅನ್ನುವುದು ಅಮಾನವೀಯ. ಯಾರೂ ಕೂಡ ದುಡ್ಡಿಗಾಗಿ ತಮ್ಮ ಜೀವ ತ್ಯಾಗ ಮಾಡುವುದಿಲ್ಲ. ಇದು ಅವರ ರೈತ ವಿರೋಧಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು. ಯಾರಾದರೂ ತೀರಿಕೊಂಡರೆ ಸಂಪೂರ್ಣ ತನಿಖೆ ಆಗುತ್ತದೆ. ಸಂಪೂರ್ಣ ಪರಿಶೀಲನೆ ಮಾಡಿದ ನಂತರವೇ ಹಣ ಬಿಡುಗಡೆ ಆಗುತ್ತದೆ. ಇದೆಲ್ಲ ಇದ್ದರೂ ಹಣಕ್ಕಾಗಿಯೇ ಸಾಯುತ್ತಾರೆ ಅನ್ನುವುದು ಎಲ್ಲಿ ಪ್ರಶ್ನೆ ಬರುತ್ತದೆ. ರಾಜ್ಯದಲ್ಲಿ ಮೂರು ತಿಂಗಳಲ್ಲಿ 172 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೂಡಲೇ ಅವರಿಗೆ ಪರಿಹಾರ ಕೊಡಬೇಕು. ಕೃಷಿ ಇಲಾಖೆ ರೈತರಿಗೆ ಕೌನ್ಸೆಲಿಂಗ್ ಮಾಡಬೇಕು ಎಂದು ಆಗ್ರಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

