ಕರ್ನಾಟಕ ಬಂದ್ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ನೀಡಿದ್ದಾರೆ.ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನ ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದರು. ತಮಿಳು ಭಾಷಿಕರು ವಾಸವಿರುವ ಪ್ರದೇಶ, ಚಿತ್ರಮಂದಿರ ಸೇರಿದಂತೆ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದರು. ನಾಳೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್ ಹಿರಿಯ ಅಧಿಕಾರಿ ಬಿ ದಯಾನಂದ, ನಾಳೆ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ಬೆಂಗಳೂರಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿಭಟನಾ ಮೆರವಣಿಗೆ, ರ‍್ಯಾಲಿಗಳಿಗೆ ಅವಕಾಶವಿರುವುದಿಲ್ಲ. ಬೆಂಗಳೂರಿನಲ್ಲಿ ಇಂದು ರಾತ್ರಿ 12 ರಿಂದ ನಾಳೆ ರಾತ್ರಿ 12ರವರೆಗೂ 144 ಸೆಕ್ಷನ್ ಜಾರಿಯಿರಲಿದೆ. ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿರಲಿದೆ. ಸಂಘಟನೆಗಳ ಕಡೆಯವರಿಗೂ ಈ ಕುರಿತು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

