ಬೆಂಗಳೂರು: ಯತೀಂದ್ರ ಅವರು ಯಾವ ಅಧಿಕಾರಿ ಹೆಸರು, ಯಾವ ಹುದ್ದೆ, ಎಷ್ಟು ಲಂಚ ಎಂದು ಎಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ನಮ್ಮ ಹುಡುಗನನ್ನು (ಯತೀಂದ್ರ) ನಾಯಕನ್ನನ್ನಾಗಿ ಬೆಳೆಸುತ್ತಿದ್ದಾರೆ. ಆರೋಪ ಮಾಡಲಿ ಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.ಯತೀಂದ್ರ ಅವರು “ನಾನು ಹೇಳಿದ್ದು ಕ್ಲಿಯರ್ ಮಾಡಿ ಅಪ್ಪ” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದು ವರ್ಗಾವಣೆ ದಂಧೆಯ ಪಟ್ಟಿ ಎಂದು ಬಿಜೆಪಿ- ಜೆಡಿಎಸ್ ಆರೋಪ ಮಾಡಿರುವ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ಮಾಜಿ ಶಾಸಕ ತಂದೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾನು ಬೆಳಿಗ್ಗೆಯೇ ಆ ವಿಡಿಯೋ ನೋಡಿದೆ. ವರ್ಗಾವಣೆ ದಂಧೆ ಎನ್ನಲು ಅವರು ಯಾವ ಅಧಿಕಾರಿ, ಯಾವ ಹುದ್ದೆ ಎಂದು ಉಲ್ಲೇಖವನ್ನೇ ಮಾಡಿಲ್ಲವಲ್ಲ. ಮಾಜಿ ಶಾಸಕರಾಗಿ ಯತೀಂದ್ರ ಅವರು ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಬೇಕಾದ 4-5 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ- ಜೆಡಿಎಸ್ ನವರಿಗೆ ಮಾಡಲು ಕೆಲಸವಿಲ್ಲ. ಯತೀಂದ್ರ ಅವರು ಆಶ್ರಯ ಸಮಿತಿ ಅಧ್ಯಕ್ಷರು. ಒಂದಷ್ಟು ಶಾಲೆಗಳಿಗೆ ಸಿಎಸ್ಆರ್ ಅನುದಾನದ ಅಡಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ವಿವೇಕಾನಂದ ಅಥವಾ ಮಹದೇವಪ್ಪ ಎನ್ನುವ ಅಧಿಕಾರಿಗೆ ಶಾಲೆಗಳನ್ನು ಗುರುತಿಸುವ ಜವಾಬ್ದಾರಿ ನೀಡಿದ್ದಾರೆ. ಯಾರೋ ಒಂದಷ್ಟು ಶಾಲೆಗಳ ಹೆಸರನ್ನು ಬದಲಾಯಿಸಿದ ಕಾರಣ, ಸ್ಥಳೀಯರು ದೂರು ನೀಡಿದ್ದರು. ಅದಕ್ಕೆ ಯತೀಂದ್ರ ಅವರು ಇಂತಿಷ್ಟು ಹಳ್ಳಿಗಳ ಶಾಲೆಗಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾತುಕೊಟ್ಟಿದ್ದು, ಅದರಂತೆ ಜನ ಸಂಪರ್ಕ ಸಭೆಯಲ್ಲಿಯೇ ಕರೆ ಮಾಡಿ ಮಾತನಾಡಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





