ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್ ನಿಂದ ಟೈಲ್ಸ್ ಮಾಡಲಾಗುತ್ತಿದ್ದು, ನಿತ್ಯ 2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಟರ್ ಲಾಕಿಂಗ್ ಮಾದರಿ ಟೈಲ್ಸ್ ಆಗಿ ಪರಿವರ್ತಿಸುತ್ತಿದೆ. ನಗರಪಾಲಿಕೆಯ ನಾನಾ ಕಾಮಗಾರಿ ಹಾಗೂ ಫುಟ್ ಪಾತ್ ಗೆ ನೆಲಹಾಸು ಹಾಕಲು ಈ ಟೈಲ್ಸ್ ಅನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಪ್ರೇರಣೆಗೊಂಡ ಚೆನ್ನೈನ ಅನೇಕ ಕಂಪನಿಗಳು ಈ ಟೈಲ್ಸ್ ಕೊಂಡೊಯ್ಯುತ್ತಿವೆ. ಆಶ್ಚರ್ಯವೆಂದರೆ 150 ಡಿಗ್ರಿವರೆಗೆ ಉಷ್ಣಾಂಶವನ್ನು ಈ ಟೈಲ್ಸ್ ತಡೆದು ಕೊಳ್ಳುತ್ತವೆ. ಬೆಂಕಿ ಬಿದ್ದರೂ ಟೈಲ್ಸ್ ಹೊತ್ತಿಕೊಳ್ಳುವುದಿಲ್ಲ.
ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್‌ಗಳಿಗೆ ಮೈಸೂರು ಮಹಾನಗರಪಾಲಿಕೆ ‘ಟೈಲ್ಸ್’ ರೂಪ ನೀಡಿದೆ. ಇಂದು ಜಗತ್ತನ್ನೇ ಪ್ಲಾಸ್ಟಿಕ್ ಸಮಸ್ಯೆ ಕಾಡುತ್ತಿದೆ. ಹಾಲಿನ ಕವರ್, ಶಾಂಪೋ, ಪೆನಾಯಿಲ್ ಬಾಟಲ್‌ಗಳನ್ನು ಹೇಗೋ ಮರು ಮಾಡಬಹುದು. ನಿತ್ಯ ಪೌರಕಾರ್ಮಿಕರು ಇದನ್ನು ಪ್ರತ್ಯೇಕಗೊಳಿಸುತ್ತಾರೆ. ಆದರೆ, ತಿಂಡಿ ತಿನಿಸು ಕವರ್ಗಳು, ಬಳಸಿ ಬಿಸಾಡಿದ ಖಾಲಿ ಪೊಟ್ಟಣಗಳನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಜಾಗೃತ್ ಟೆಕ್ ಪ್ರೈ.ಲಿ. ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆರು ತಿಂಗಳಿಂದ 350 ಟನ್ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿರುವ ಕಂಪನಿ 100 ಟನ್ ನಷ್ಟು ತ್ಯಾಜ್ಯವನ್ನು ‘ಟೈಲ್ಸ್’ ಆಗಿ ಪರಿವರ್ತಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





