ಮೈಸೂರು: ಗತ್ತು, ಗೈರತ್ತು, ಗಾಂಭೀರ್ಯದ ನಡಿಗೆ ಮೂಲಕ ಜನಮನ ಗೆದ್ದಿದ್ದ ಸಾಕಾನೆ ಅರ್ಜುನನ ಯುಗಾಂತ್ಯವಾಗಿದೆ. ಇಡೀ ನಾಡು ಆತನ ಸಾವಿಗೆ ಕಣ್ಣೀರಿಟ್ಟಿದೆ. ಅದರಲ್ಲೂ ವಾಸಸ್ಥಾನವಾದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಂತೂ ದುಃಖ ಮಡುಗಟ್ಟಿದೆ. ಈ ಆನೆ ಶಿಬಿರದಿಂದ ಅರ್ಜುನನ ನೆನಪು ಮಾಸಲು ಸಾಧ್ಯವೇ ಇಲ್ಲದಂತಾಗಿದೆ.
ಬಳ್ಳೆ ಆನೆ ಶಿಬಿರ ದೈತ್ಯ ಗಜರಾಜರ ತಾಣ ಎಂದರೂ ತಪ್ಪಾಗುವುದಿಲ್ಲ. ಇವತ್ತಿಗೂ ಅರ್ಜುನ ಸೇರಿದಂತೆ ಈ ಹಿಂದೆ ಅಂಬಾರಿ ಹೊತ್ತಿದ್ದ ದ್ರೋಣ ಮತ್ತು ರಾಜೇಂದ್ರ ಸಾಕಾನೆಗಳು ಇಲ್ಲಿದ್ದವು ಎನ್ನುವುದೇ ಖುಷಿಯ ವಿಚಾರವಾಗಿದೆ. ಪ್ರತಿ ವರ್ಷವೂ ಮೈಸೂರು ದಸರಾಕ್ಕೆ ಕೊಡಗು ಮೈಸೂರು ಮತ್ತು ಚಾಮರಾಜನಗರ ಆನೆಶಿಬಿರಗಳಿಂದ ಸಾಕಾನೆಗಳನ್ನು ಕರೆಯಿಸಿ ಅವುಗಳಿಗೆ ತಾಲೀಮು ನಡೆಸಿ ಜಂಬೂಸವಾರಿಯಲ್ಲಿ ಬಳಸಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿದೆ.
ಆನೆ ಶಿಬಿರಗಳಿಂದ ಬರುವ ಸಾಕಾನೆಗಳ ಪೈಕಿ ಸಮರ್ಥ ಮತ್ತು ದೈತ್ಯ ಸಾಕಾನೆಯನ್ನು ಆಯ್ಕೆ ಮಾಡಿ ಅದನ್ನು ಅಂಬಾರಿ ಹೊರಲು ಬಳಸಿಕೊಳ್ಳಲಾಗುತ್ತಿದ್ದು, ಅದರಂತೆ ಅಂಬಾರಿ ಹೊತ್ತ ಆನೆಗಳ ಪೈಕಿ ದ್ರೋಣ, ರಾಜೇಂದ್ರ, ಅರ್ಜುನ ಬಳ್ಳೆ ಶಿಬಿರದವರು ಎನ್ನುವುದೇ ವಿಶೇಷ. ಇದುವರೆಗೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಇದುವರೆಗೆ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಇಂತಹ ಅಂಬಾರಿ ಹೊತ್ತ ಆನೆಗಳ ನಡುವೆ ದ್ರೋಣ ಮತ್ತು ರಾಜೇಂದ್ರರ ಹೆಸರು ಅಚ್ಚಳಿಯದೆ ಉಳಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




