ಬೆಂಗಳೂರು: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ರಾಷ್ಟ್ರೀಯ ಪಕ್ಷಗಳಿಗೆ ಹೊಸವರ್ಷ ಹತ್ತು ಹಲವು ಸವಾಲಿನ ವರ್ಷವಾಗಿ ಮಾರ್ಪಡುತ್ತಿದೆ. ದೇಶದಲ್ಲಿ ರಾಜಕೀಯ ಪಕ್ಷಗಳು ಐಎನ್‌ಡಿಐಎ ಮತ್ತು ಎನ್‌ಡಿಎ ಎಂಬ ಎರಡು ಬೃಹತ್ ಶಕ್ತಿಗಳಾಗಿ ಅಖಾಡಕ್ಕಿಳಿದಿವೆ. ಮತದಾರರು ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ. ಆದರೆ ಮತದಾರರನ್ನು ಓಲೈಸುವ ಕಾರ್ಯಗಳಂತು ಎಗ್ಗಿಲ್ಲದೆ ನಡೆಯಲಿದೆ.
ಕರ್ನಾಟಕದ ಮಟ್ಟಿಗೆ ರಾಜಕೀಯವಾಗಿ ಹೇಳುವುದಾದರೆ ಕಳೆದ ವರ್ಷದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಹಿಯನ್ನು ಅನುಭವಿಸಿದರೆ, ಕಾಂಗ್ರೆಸ್ ಪಾಲಿಗೆ ಸಿಹಿ ಅನುಭವವಾಗಿದೆ. ಹೋರಾಟ, ಪಂಚ ಗ್ಯಾರಂಟಿಗಳು, ಮತ್ತೊಂದಷ್ಟು ತಂತ್ರಗಳಿಂದ ಅಧಿಕಾರ ಹಿಡಿದ ಕಾಂಗ್ರೆಸ್ ರಾಜ್ಯದಲ್ಲಿ 136 ಸ್ಥಾನಗಳನ್ನು ಪಡೆಯುವ ಮೂಲಕ ಭದ್ರ ಅಡಿಪಾಯದೊಂದಿಗೆ ಆಡಳಿತ ನಡೆಸುತ್ತಿದೆ.
ಬಿಜೆಪಿ ಆಡಳಿತದಲ್ಲಿ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು, ಒಳಜಗಳ, ಗುಜರಾತ್ ಮಾದರಿ ಅಳವಡಿಕೆಗೆ ಮುಂದಾಗಿದ್ದು, ಹಿರಿಯ ನಾಯಕರ ಕಡಗಣನೆ, ಒಂದಷ್ಟು ವಿವಾದಗಳು ಹೀಗೆ ಒಂದು ರಾಜಕೀಯ ಪಕ್ಷ ನೆಲಕಚ್ಚಲು ಏನೆಲ್ಲ ಬೇಕೋ ಅದೆಲ್ಲವೂ ಇದ್ದಿದ್ದರಿಂದ ಬಿಜೆಪಿ ಚುನಾವಣೆಯಲ್ಲಿ 66 ಸ್ಥಾನ ಪಡೆದು ಅಧಿಕಾರ ಕಳೆದುಕೊಂಡು ವಿರೋಧಪಕ್ಷದಲ್ಲಿ ಕೂರುವಂತಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





