ಧಾರವಾಡ: ಬರುವ ಶನಿವಾರ ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿದೆ. ಈದ್ ಮಿಲಾದ್ ಹಬ್ಬ ಕೂಡ ಮುಂದಿನ ವಾರದಲ್ಲಿ ಬರುವುದರಿಂದ ಹಿಂದೂ, ಮುಸ್ಲಿಂ ಮುಖಂಡರನ್ನು ಕರೆಯಿಸಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಶಾಂತಿ ಪಾಲನಾ ಸಭೆ ನಡೆಸಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಿಂದೂ, ಮುಸ್ಲಿಂ ಮುಖಂಡರು, ಗಣೇಶ ಯುವಕ ಮಂಡಳದವರು ಹಾಗೂ ಮುಸ್ಲಿಂ ಯುವಕ ಸಂಘಟನೆಗಳ ಕಾರ್ಯಕರ್ತರನ್ನು ಸೇರಿಸಿ ಶಾಂತಿ ಪಾಲನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು, ಹಿಂದೂ ಧರ್ಮ ಗುರುಗಳು ಹಾಗೂ ಎರಡೂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಯಾವ ರೀತಿ ಪಾಲನೆ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಕೊಟ್ಟ ಸೂಚನೆಗಳನ್ನು ಯಾವ ರೀತಿ ಪಾಲಿಸಬೇಕು ಎಂಬುದರ ಕುರಿತು ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಗಲಾಟೆ, ಗದ್ದಲ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಡಿಜೆ ಬಗ್ಗೆ ಸರ್ಕಾರದಿಂದ ಇನ್ನೂ ನಿರ್ದೇಶನ ಬಂದಿಲ್ಲ. ಸರ್ಕಾರದ ನಿಯಮ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ ತಿಳಿಸಿದರು.
ಸಾರ್ವಜನಿಕರು ಸರ್ಕಾರದ ನಿಯಮಕ್ಕೆ ಬದ್ಧವಾಗಿರಬೇಕು. ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಖಡಕ್ ಸೂಚನೆ ಕೊಟ್ಟರು. ಸಭೆಯಲ್ಲಿ ಡಿಸಿಪಿಗಳಾದ ರವೀಶ್, ಎಂ.ನಂದಗಾವಿ, ಎಸಿಪಿ ಪ್ರಶಾಂತ ಸಿದ್ದನಗೌಡರ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

