ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ತರಹೇವಾರಿ ಬಣ್ಣಗಳ ವಿದ್ಯುತ್ ದೀಪಗಳ ಹೊಳಪು ಕಂಡುಬರುತ್ತಿದೆ. ಎಲ್ಲೆಡೆಯೂ ಗಣೇಶ ಮೂರ್ತಿಗಳ ಮಾರಾಟ ಹಾಗೂ ಖರೀದಿಯ ಉತ್ಸಾಹವೂ ಇದೆ.
ಶ್ರಾವಣ ಮಾಸ ಮುಗಿದ ತಕ್ಷಣವೇ ಬರುವ ಮೊದಲ ಹಬ್ಬ ಗೌರಿ ಹಾಗೂ ಗಣೇಶನ ಪ್ರತಿಷ್ಠಾಪನೆ ಜನರಲ್ಲಿ ಹುಮ್ಮಸ್ಸು ಮೂಡಿಸಿದೆ, ಅದರಲ್ಲಿಯೂ ವಿಶೇಷವಾಗಿ ಯುವಜನತೆಯಲ್ಲಿ ಗಣಪತಿ ಹಬ್ಬ ಹಬ್ಬದ ಹುಮಸ್ಸು ನೂರ್ಮಡಿಯಾಗಿದೆ. ಹಬ್ಬದ ತಿಂಗಳು ಮೊದಲೇ ಸಾರ್ವಜನಿಕರಿಂದ ಹಾಗೂ ಬಡಾವಣೆಯ ಜನರಿಂದ ಮನೆಮನೆಗೆ ಹೋಗಿ ಹಣ ಸಂಗ್ರಹಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಕಡ್ಡಾಯ ಮಾಡಿರುವುದರಿಂದ ಆಯಾ ಪೊಲೀಸ್ ಠಾಣೆಗಳಲ್ಲಿ ಜನಸಂದಣೆಯೂ ಹೆಚ್ಚಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇತ್ತೀಚೆಗೆ ಸಭೆ ನಡೆಸಿ ಶಾಂತಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕು. ಪರವಾನಗಿ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಿದ್ದಾರೆ. ಕೊಪ್ಪಳ ಕಾ ರಾಜಾ, ಕೊಪ್ಪಳ ಕಾ ಸಾಮ್ರಾಟ, ಗಜಾನನ ಗೆಳೆಯರ ಬಳಗ, ಗಜಾನನ ಕೆಜಿಎಫ್ ಗೆಳೆಯರ ಬಳಗ, ಕೋಟೆ ರಸ್ತೆಯಲ್ಲಿ ವಿನಾಯಕ ಮಿತ್ರಮಂಡಳಿ, ಕಾವ್ಯಾನಂದ ಉದ್ಯಾನದಲ್ಲಿ ಹಿಂದೂ ಮಹಾ ಮಂಡಳಿ, ಮೇದಾರ ಕೇತೇಶ್ವರ ಯುವಕ ಮಂಡಳಿ ಹೀಗೆ ಅನೇಕ ಸಂಘಗಳು ದೊಡ್ಡಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿವರ್ಷವೂ ಪ್ರತಿಷ್ಠಾಪನೆ ಮಾಡುತ್ತಲೇ ಬಂದಿವೆ. ಈ ವರ್ಷವೂ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜವಾಹರ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಾಕಿರುವ ಟೆಂಟ್‌ಗಳು ಗಮನ ಸೆಳೆಯುವಂತಿವೆ. ಗಣೇಶ ಹಬ್ದದ ಪೂಜೆಗೆ ಮಾರುಕಟ್ಟೆಯಲ್ಲಿ ಬಾಳೆದಿಂಡು, ಬೆಳೆ ಎಲೆ, ಬಾಳೆಹಣ್ಣು, ಸೇಬುಹಣ್ಣು, ಮೋಸಂಬಿ ಹಣ್ಣು ಹೀಗೆ ತರಹೇವಾರಿ ಹಣ್ಣುಗಳ ಖರೀದಿ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಚೆಂಡು ಹೂ ಕೂಡ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

