ಬೆಂಗಳೂರು: ಇಲ್ಲಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವ ಜೊತೆಗೆ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಭರವಸೆ ನೀಡಿದರು.
ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಮತ್ತು ಡಿಜಿಟಲ್ ಡೆಂಟಿಸ್ಟ್ರಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
ಇಲ್ಲಿನ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ದೇಶದ ಅತ್ಯಂತ ಹಳೆಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. 1958ರಲ್ಲಿ ಸ್ಥಾಪನೆಯಾದ ಈ ಕಾಲೇಜು, ದಂತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಆರು ದಶಕಗಳ ಕಾಲ ಸೇವೆ ಒದಗಿಸಿದೆ. ಈ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆ ನಮ್ಮ ರಾಜ್ಯದ ಹೆಮ್ಮೆಯಾಗಿದ್ದು, ಈಗ ಎಲ್ಲ ವಿಭಾಗಗಳಲ್ಲಿ ಆಧುನೀಕರಣದ ಅಗತ್ಯವಿದೆ. ಶೀಘ್ರದಲ್ಲೇ ಈ ಸಂಸ್ಥೆಗೂ ಸುಧಾರಿತ ಉಪಕರಣಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ತಂತ್ರಜ್ಞಾನಗಳು ದಂತ ವೈದ್ಯ ವಿಜ್ಞಾನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ, ಡಿಜಿಟಲ್ ಡೆಂಟಿಸ್ಟ್ರಿಯು ನಿಖರ ಶಸ್ತ್ರಚಿಕಿತ್ಸೆಗೆ ಸಹಕಾರಿಯಾಗಿದೆ ಇದರ ನೆರವಿನಿಂದ ವೇಗವಾಗಿ ಚಿಕಿತ್ಸೆ ಒದಗಿಸಲೂ ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಗಿರೀಶ್ ಗಿರಡ್ಡಿ, ದಂತ ವೈದ್ಯ ಡಾ. ಕಿರಣ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

