ನವದೆಹಲಿ: ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿರುವುದರಿಂದ ದೇಶದ ಪ್ರಮುಖ ನಗರಗಳ ವ್ಯಾಪ್ತಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಇಳಿಕೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 5ರಂದು ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಕೆ.ಜಿಗೆ ₹35 ದರದಲ್ಲಿ ಸಂಚಾರ ವಾಹನಗಳು, ಎನ್‌ಸಿಸಿಎಫ್ ಮತ್ತು ನಾಫೆಡ್ ಮೂಲಕ ಮಾರಾಟಕ್ಕೆ ಚಾಲನೆ ನೀಡಿತ್ತು.
ಎರಡನೇ ಹಂತದಲ್ಲಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಆರಂಭಿಸುವುದಾಗಿ ಹೇಳಿದೆ.
ಸದ್ಯ ದೆಹಲಿಯಲ್ಲಿ ಪ್ರತಿ ಕೆ.ಜಿ ದರವು ₹60ರಿಂದ ₹55ಕ್ಕೆ ಇಳಿಕೆಯಾಗಿದೆ. ಮುಂಬೈನಲ್ಲಿ ₹61ರಿಂದ ₹56ಕ್ಕೆ ಹಾಗೂ ಚೆನ್ನೈನಲ್ಲಿ ₹65ರಿಂದ 58ಕ್ಕೆ ತಗ್ಗಿದೆ ಎಂದು ವಿವರಿಸಿದೆ.
ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ದರದಡಿ ಈರುಳ್ಳಿ ಮಾರಾಟ ಹೆಚ್ಚಳಕ್ಕೆ ಕೇಂದ್ರ ನಿರ್ಧರಿಸಿದೆ. ಇ-ಕಾಮರ್ಸ್ ವೇದಿಕೆಗಳು, ಕೇಂದ್ರೀಯ ಭಂಡಾರ ಮಳಿಗೆಗಳು ಮತ್ತು ಮದರ್ ಡೈರಿಯ ಸಫಲ್ ಮಳಿಗೆಗಳ ಮೂಲಕವೂ ಮಾರಾಟಕ್ಕೆ ಸಿದ್ಧತೆ ನಡೆಸಿದೆ.
ಈರುಳ್ಳಿ ಕಟಾವು ಮಾಡಿದ ಬಳಿಕ ಸಕಾಲದಲ್ಲಿ ಸಂಸ್ಕರಣೆ ಮಾಡದಿದ್ದರೆ ಬಹುಬೇಗ ಹಾಳಾಗುತ್ತದೆ. ಹಾಗಾಗಿ, ಸಂಸ್ಕರಣಾ ಸ್ಥಳಗಳಿಗೆ ಸಾಗಿಸಲು ಅನುವಾಗುವಂತೆ ರಸ್ತೆ ಹಾಗೂ ರೈಲು ಸಾಗಣೆಯನ್ನು ಬಲಪಡಿಸಲಾಗಿದೆ. ಮಾರುಕಟ್ಟೆಯಲ್ಲಿನ ಬೆಲೆ ಮತ್ತು ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಪೂರೈಸಲು ರಾಜ್ಯ ಸರ್ಕಾರಗಳ ಜೊತೆಗೆ ನಿರಂತರವಾಗಿ ಸಂಪರ್ಕ ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

