ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 06 ಹೊಸ ವಂದೇ ಭಾರತ್ ರೈಲು ಸಂಚಾರ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಿ ಧಾರವಾಡಕ್ಕೆ ಕೊನೆಗೊಳ್ಳುವ ವಂದೇ ಭಾರತ್ ರೈಲನ್ನು ಬೆಳಗಾವಿ ವಿಸ್ತರಣೆಗೆ ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದರು.
ಇದೀಗ ಮತ್ತೆ ಅದೇ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಹೊಸ ವಂದೇ ಭಾರತ್ ರೈಲುಗಳ ಪೈಕಿ ಒಂದು ಪುಣೆಯಿಂದ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತದೆ. ಆದರೆ ಬೆಂಗಳೂರಿನಿಂದ ಧಾರವಾಡಕ್ಕೆ, ಇಲ್ಲ ಧಾರವಾಡದಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಇಲ್ಲ. ಬಹುದಿನಗಳಿಂದ ಬೆಳಗಾವಿವರೆಗೆ ಈ ರೈಲು ವಿಸ್ತರಣೆಗೆ ಬೇಡಿಕೆ ಇದೆ. ಆದರೆ ಇನ್ನು ಸಾಕಾರವಾಗಿಲ್ಲ. ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ರೈಲ್ವೆ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಇದೀಗ ಪಟ್ಟು ಬಿಡದ ಜಗದೀಶ್ ಶೆಟ್ಟರ್ ಅವರು, ಈಗಾಗಲೇ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಬೆಂಗಳೂರು ರೈಲು ಬೆಳಗಾವಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದ್ದರು. ಅವರು ಸಕಾರಾತ್ಮಕವಾಗಿ ಭರವಸೆ ನೀಡಿದ್ದರು. ಇದೀಗ ಮತ್ತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಖುದ್ದು ಸಂಸದರು ಭೇಟಿಯಾಗಿ ಹೊಸ ಮಾರ್ಗದಲ್ಲಿ ರೈಲು ವಿಸ್ತರಣೆಗೆ ಮನವಿ ಮಾಡಿದ್ದು, ಈ ಕುರಿತು ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

