Breaking News

ಬೀದರ್‌ ನಲ್ಲಿ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ

ಬೀದರ್‌: ಇಲ್ಲಿನ ಭಾರತೀಯ ವಾಯುಪಡೆ ತರಬೇತಿ ಕೇಂದ್ರಕ್ಕೆ ಸೇರಿದ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು.
ಶನಿವಾರ ಸಂಜೆ ನಗರದ ಬಹಮನಿ ಕೋಟೆಯ ಆಗಸದ ಮೇಲೆ ಲೋಹದ ಹಕ್ಕಿಗಳ ಕರಾಮತ್ತು ನೋಡಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಿಸಿದರು. ಕೋಟೆಯ ಆವರಣದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಕಲಾಗಿತ್ತು. ಅದರ ನಡುವೆ ಸೂರ್ಯಕಿರಣ ವಿಮಾನಗಳ ಮೈನವಿರೇಳಿಸುವ ಕಸರತ್ತು ಜನರನ್ನು ಮಂತ್ರ ಮುಗ್ಧಗೊಳಿಸಿತು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಹೊಗೆ ಹೊರಹಾಕುತ್ತ ವಿಮಾನಗಳು ಹಾದು ಹೋದಾಗ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿದ್ಯಾರ್ಥಿಗಳು ಶಿಳ್ಳೆ ಹೊಡೆದು, ಕೈಬೀಸಿ ಸಂಭ್ರಮಿಸಿದರು. ಕೆಲ ವಿದ್ಯಾರ್ಥಿಗಳು ರಾಷ್ಟ್ರ ಧ್ವಜದೊಂದಿಗೆ ಮೈಮರೆತು ಹೆಜ್ಜೆ ಕೂಡ ಹಾಕಿದರು.
ವಿಮಾನಗಳು ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲಕ್ಕೆ, ಪರಸ್ಪರ ಮುಖಾಮುಖಿಯಾಗಿ ಕ್ರಾಸಿಂಗ್‌, ಬ್ಯಾರಲ್‌ ರೋಲ್‌ ಸೇರಿದಂತೆ ಹಲವು ಬಗೆಯ ಪ್ರದರ್ಶನ ನೀಡಿದವು. ಕೆಲವು ಸಲ ಒಂದೊಂದೆ ವಿಮಾನಗಳು ಬಂದರೆ, ಕೆಲವು ಸಲ ಒಟ್ಟಿಗೆ ಒಂಬತ್ತು ವಿಮಾನಗಳು ಬಂದು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಕೋಟೆಯ ಸ್ಮಾರಕಗಳಿಗೆ ಕಳೆಗಟ್ಟಿದವು.
ಸೂರ್ಯಕಿರಣ ವಿಮಾನಗಳ ಟೀಂ ಲೀಡರ್ ಗ್ರುಪ್ ಕ್ಯಾಪ್ಟನ್ ಗುರುಪ್ರೀತ್‌ ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ವೈಮಾನಿಕ ಪ್ರದರ್ಶನ ನಡೆಯಿತು. ಸಂಜೆ 4ಗಂಟೆಗೆ ಆರಂಭಗೊಂಡ ಏರ್‌ ಶೋ 4.25ರ ವರೆಗೆ ನಡೆಯಿತು. ಆದರೆ, ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಮಧ್ಯಾಹ್ನ 2.30ಕ್ಕೆ ಕೋಟೆಗೆ ಬಂದು ಸೇರಿದ್ದರು. ಇಡೀ ಕೋಟೆಯ ಪರಿಸರದಲ್ಲಿ ಜನಜಂಗುಳಿ ಇತ್ತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಭಾರತೀಯ ವಾಯುಪಡೆ ತರಬೇತಿ ಕೇಂದ್ರದ ಏರ್‌ ಕಮೊಡೋರ್ ಪರಾಗಲಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಏರ್ ಶೋ ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್ ಹಾಜರಿದ್ದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *