ಬೆಂಗಳೂರು : ರಾಜ್ಯ ಸರ್ಕಾರದಿಂದ ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಯೋಜನೆಗೆ ಮೂಲಸೌಕರ್ಯ ನಿರ್ಮಿಸಲು 390 ಕೋಟಿ ರೂಪಾಯಿ ಅನುದಾನ ಸಚಿವ ಸಂಪುಟದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ಮಾಹಿತಿ ನೀಡಿದರು.
ಎಪಿಎಂಸಿ ವರ್ತಕರು ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಅಧ್ಯಕ್ಷರ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಒಂದು ಸಾವಿರ ಎಕರೆ ಭೂಮಿ ಹಂಚಿಕೆ ಮಾಡಿ ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಯೋಜನೆಗೆ ಈಗಾಗಲೇ ಖಾತೆ ಮಾಡಿಸಲಾಗಿದೆ. ಅಲ್ಲದೇ ಮೂಲಸೌಕರ್ಯ ನಿರ್ಮಾಣಕ್ಕೆ ಈ ಮೊದಲು 50 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಹೆಚ್ಚಿನ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರದ 7 ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ಗಳಲ್ಲಿ ರಾಜ್ಯಕ್ಕೆ ಒಂದು ಯೋಜನೆ ಲಭಿಸಿದೆ. ಸ್ಪಿನ್ನಿಂಗ್ನಿಂದ ಡೈಯಿಂಗ್ ಹಂತದವರೆಗೆ ಎಲ್ಲ ಪ್ರಕ್ರಿಯೆಗಳು ಒಂದೇ ಸೂರಿನಡಿ ನಡೆಯಲಿವೆ. ಈ ಯೋಜನೆಯಿಂದ ಸುಮಾರು 1.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news

