ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಕೆಲಸದ ಹೊರೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಮುಷ್ಕರ ನಿರತ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಪದಾಧಿಕಾರಿಗಳನ್ನು ವಿಕಾಸಸೌಧದ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಭರವಸೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಹೊರೆ ಅಧಿಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಶ್ರಮವಿಲ್ಲದೆ ಬರ ಸಂದರ್ಭದಲ್ಲಿ ಫ್ರೂಟ್ ಮೂಲಕ ನೈಜ ದತ್ತಾಂಶಗಳನ್ನು ಪಡೆದು ರೈತರ ಖಾತೆಗೆ ನೇರವಾಗಿ ಬರ ಪರಿಹಾರ ತಲುಪಿಸುವುದು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಬೀಟ್ ಆಪ್ ಹಾಗೂ ಆಧಾರ್ ಸೀಡಿಂಗ್ ಹಾಗೂ ಫೌತಿ ಖಾತೆ ಅಭಿಯಾನದಲ್ಲೂ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವವಾದದ್ದು. ಹೀಗಾಗಿ ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಎಲ್ಲ ಅಭಿಯಾನಗಳಿಗೂ ಒಟ್ಟಿಗೆ ಚಾಲನೆ ನೀಡದೆ, ಅವರ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೊಬೈಲ್ ಅಥವಾ ಲ್ಯಾಪ್ ಟಾಪ್ ನೀಡಬೇಕು ಎಂಬ ಬೇಡಿಕೆ ಇದೆ. ಸರ್ಕಾರವೂ ಈಗಾಗಲೇ ಈ ಬಗ್ಗೆ ಚಿಂತನೆ ನಡೆಸಿದೆ. ಫೀಲ್ಡ್ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಲ್ಯಾಪ್ ಟಾಪ್-ಮೊಬೈಲ್ ಎರಡೂ ರೀತಿ ಕೆಲಸ ಮಾಡಬಲ್ಲ ಟ್ಯಾಬ್ ನೀಡುವ ಬಗ್ಗೆ ಚಿಂತಿಸಲಾಗಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಅಧಿಕಾರಿಗಳಿಗೆ ಟ್ಯಾಬ್ ವಿತರಿಸಲಾಗಿದ್ದು, ಮುಂದಿನ ವರ್ಷದೊಳಗೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೂ ಟ್ಯಾಬ್ ನೀಡಲು ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

