Breaking News

ಕೆಎಂಎಫ್ ಗೆ ಹೆಚ್ಚುವರಿ 250 ಟನ್ ನಂದಿನಿ ತುಪ್ಪ ಪೂರೈಕೆಗೆ ಟಿಟಿಡಿ ಬೇಡಿಕೆ

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರೆಕೆ ತುಪ್ಪ ಬಳಸಲಾಗಿದೆ ಎಂಬ ವಿಚಾರ ದೇಶದಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಇದೀಗ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಫ್) ಮತ್ತೆ ಸುಮಾರು 250 ಟನ್‌ ಶುದ್ಧ ಹಸುವಿನ ತುಪ್ಪ ಪೂರೈಸುವಂತೆ ಕೋರಿದೆ.
ಈ ಹಿಂದೆ ತಿರುಪತಿ ಲಡ್ಡು ತಯಾರಿಗೆ ಕೆಎಂಎಫ್ ತುಪ್ಪವನ್ನೇ ಬಳಸಲಾಗುತ್ತಿತ್ತು. ಒಂದೆರಡು ವರ್ಷಗಳ ಹಿಂದೆ ಬೆಲೆ ಹೆಚ್ಚಳ ನೆಪವೊಡ್ಡಿ ಕೆಲವು ಖಾಸಗಿ ಹಾಲಿನ ಡೇರಿಗಳಿಂದ ತುಪ್ಪ ಖರೀದಿಸಲು ಆರಂಭಿಸಿತ್ತು. ಕೋಟ್ಯಂತರ ಭಕ್ತರ ನಂಬಿಕೆಯ ಬುನಾದಿಯನ್ನು ಅಲುಗಾಡಿಸಿರುವ ಕಹಿ ವಿವಾದದ ಅನಂತರ ಎಚ್ಚೆತ್ತುಕೊಂಡಿರುವ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಮತ್ತೆ ಕೆಎಂಎಫ್‌ನಿಂದ ಹೆಚ್ಚುವರಿ ತುಪ್ಪ ಖರೀದಿಸುವ ನಿರ್ಧಾರಕ್ಕೆ ಬಂದಿದೆ.
ತಿರುಪತಿ ದೇವಸ್ಥಾನ ಆಡಳಿತ ಮತ್ತು ಕೆಎಂಎಫ್ ತುಪ್ಪ ಪೂರೈಕೆ ಸಂಬಂಧ ಒಡಬಂಡಿಕೆ ಮಾಡಿಕೊಂಡಿವೆ. ಕಳೆದ ಸೆಪ್ಟಂಬರ್‌ನಿಂದಲೇ 3 ತಿಂಗಳು 350 ಟನ್‌ ತುಪ್ಪ ಪೂರೈಸುವ‌ ಪ್ರಕ್ರಿಯೆ ಆರಂಭವಾಗಿದೆ. ಮತ್ತೆ ಹೆಚ್ಚುವರಿಯಾಗಿ 250 ಟನ್‌ ಹಸುವಿನ ತುಪ್ಪಕ್ಕೆ ಬೇಡಿಕೆ ಸಲ್ಲಿಸಿದೆ ಎಂದು ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಹೇಳಿದ್ದಾರೆ.
ಕರ್ನಾಟಕ ಹಾಲು ಒಕ್ಕೂಟದಲ್ಲಿ ಸುಮಾರು 7,500 ಟನ್‌ ತುಪ್ಪ ದಾಸ್ತಾನು ಇದೆ. ಇದಲ್ಲದೆ 2,500 ಟನ್‌ ತುಪ್ಪವನ್ನು ಚಿಲ್ಲರೆ ಮತ್ತು ಇತರ ಉದ್ದೇಶಗಳಿಗಾಗಿ ಪೂರೈಸಲಾಗುತ್ತಿದೆ. ಭಕ್ತರಿಗೆ ಪ್ರಸಾದ ಮತ್ತು ಇತರ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಂದಿನಿ ತುಪ್ಪ ಬಳಕೆಯನ್ನು ರಾಜ್ಯ ಸರಕಾರವು ಕಡ್ಡಾಯಗೊಳಿಸಿದ ಅನಂತರ ಕೆಎಂಎಫ್ ತುಪ್ಪಕ್ಕೆ ಈಗ ರಾಜ್ಯವ್ಯಾಪಿ ಹಲವಾರು ಧಾರ್ಮಿಕ ಸಂಸ್ಥೆಗಳು ಮತ್ತು ದೇವಾಲಯಗಳಿಂದ ಬೇಡಿಕೆ ಬರುತ್ತಿದೆ ಎಂದು ಕೆಎಂಎಫ್ನ ಮಾರಾಟ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *