ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ನಿನ್ನೆ (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದ ಒಟ್ಟು 69 ಜನರ ಹೆಸರನ್ನು ಪ್ರಕಟಿಸಿದರು. ಇದರಲ್ಲಿ ಮುಖ್ಯವಾಗಿ ತುಂಗಭದ್ರಾ ಜಲಾಶಯವನ್ನು ಕಾಪಾಡಿದ ಕನ್ನಯ್ಯ ನಾಯ್ಡುಗೆ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಕನ್ನಯ್ಯ ನಾಯ್ಡು ಅವರ ಕೆಲಸಕ್ಕೆ ರಾಜ್ಯ ಸರ್ಕಾರ ಋಣ ತೀರಿಸಿದೆ.
ಕನ್ನಯ್ಯ ನಾಯ್ಡು ಅವರು ಕರ್ನಾಟಕದಲ್ಲದವರಾಗಿದ್ದರೂ ಸಹ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಗಸ್ಟ್ 10ರ ರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ಕೊಚ್ಚಿ ಹೋಗಿತ್ತು. ಗೇಟ್ ಅಳವಡಿಕೆ ಕಾರ್ಯಕ್ಕೆ ನಿರ್ಣಾಯಕ ನಿವೃತ್ತ ಇಂಜಿನಿಯರ್ ಮತ್ತು ಡ್ಯಾಮ್ ಗೇಟ್ ನಿರ್ಮಾಣ ಮತ್ತು ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಭೇಟಿ ಮಾಡಲಾಯಿತು. ನಾಯ್ಡು ಅವರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಕ್ಷಿಪ್ರವಾಗಿ ಮುಗಿಸಿತ್ತು. ಕೊಚ್ಚಿಹೋಗಿದ್ದ ಸ್ಪಿಲ್‌ವೇ ಗೇಟ್ ನಂ.19ರ ಬದಲಿಗೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಯ್ತು. ಈ ಮೂಲಕ ಕರುನಾಡಿನ ಜನತೆ ಡ್ಯಾಂ ತಜ್ಞ ಕನ್ನಯ್ಯ ಅವರನ್ನು ಕಲ್ಯಾಣ ಕರ್ನಾಟಕದ ಭಗೀರಥ ಎಂದು ಕರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

