Breaking News

ಶಿಗ್ಗಾಂವಿಯಲ್ಲಿ ಸಾಮಾನ್ಯ ಕುಟುಂಬದ ಪಠಾಣ್ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ

ಶಿಗ್ಗಾಂವಿ: ಇಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹುಲಗೂರ ಗ್ರಾಮದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಜ್ಜನೂ ಮುಖ್ಯಮಂತ್ರಿಯಾಗಿ, ಅಪ್ಪನೂ ಮುಖ್ಯಮಂತ್ರಿ ಆಗಿದ್ದವರ ಮಗನ ವಿರುದ್ಧ ಸಾಮಾನ್ಯ ಕುಟುಂಬದ ಪೈಲ್ವಾನ್ ಪಠಾಣ್ ಕಣದಲ್ಲಿದ್ದಾರೆ.
ಇವರನ್ನು ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಿ ಎಂದು ಮನವಿ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅವರು ಗೆಲ್ಲಬೇಕು ಎಂದು ಹೇಳಿದರು.
ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಹೆಸರಲ್ಲೂ ಲಂಚ ಪಡೆದು ಕುಖ್ಯಾತರಾದವರು ಬಸವರಾಜ ಬೊಮ್ಮಾಯಿ. ಸತ್ತ ಹೆಣಗಳ‌ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಅವರದ್ದಾಗಿತ್ತು. ಕೋವಿಡ್ ಸಂದರ್ಭದಲ್ಲೂ ಜನ ಸಂಕಷ್ಟದಲ್ಲಿ ನರಳುವಾಗಲೂ ಲಂಚ ಪಡೆದವರ ಪುತ್ರನನ್ನು ಸೋಲಿಸಿ. ಅಜ್ಜಂಪೀರ್ ಖಾದ್ರಿ ನನಗೆ ತುಂಬಾ ಬೇಕಾದವರು ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ಧರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ಧರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆಯಿದೆ ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಾಸ್ ಪಡೆದು ಪಠಾಣ್ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು. ಆದರೆ ನಮ್ಮ ಸರ್ಕಾರ ಜಾರಿಗೆ ಬಂದ ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಲಕ್ಷಾಂತರ ತಾಯಂದಿರು ಗ್ಯಾರಂಟಿಗಳ ಅನುಕೂಲಗಳನ್ನು ಪ್ರತೀ ದಿನ ಪಡೆಯುತ್ತಿದ್ದಾರೆ. ಮೋದಿ ಅವರ ಸುಳ್ಳುಗಳು ಬಯಲಾಗುತ್ತಲೇ ಇವೆ ಎಂದು ನುಡಿದರು.
ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ ಎಂದು ಹೇಳಿದ್ದರು‌. ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆ? ಕೃಷಿ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ನಿಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಬೊಮ್ಮಾಯಿಯವರೇ? ನೀವು ಸಿಎಂ‌ ಆಗಿದ್ದಾಗಲಾದರೂ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲವಲ್ಲಾ ಏಕೆ ಸ್ವಾಮಿ? ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದವರಿಗೆ, ದಲಿತರಿಗೆ, ಮಹಿಳೆಯರಿಗೆ, ಬಡವರಿಗೆ ಇಂತಿಂಥಾ ಕೆಲಸ ಮಾಡಿದ್ದೇವೆ ಎಂದು ಜನರಿಗೆ ಹೇಳಲು ಬಿಜೆಪಿ ಅವರ ಬಳಿ ಏನೂ ಇಲ್ಲ. ಏನಾದ್ರೂ ಜನರ ಕೆಲಸ ಮಾಡಿದ್ರೆ ಅದು ನಮ್ಮ ಸರ್ಕಾರ. ಬಿಜೆಪಿ ಬಳಿ ಸುಳ್ಳು ಬಿಟ್ಟರೆ ಬೇರೆ ಏನೂ ಇಲ್ಲ. ವಕ್ಫ್ ಭೂಮಿ ತೆರವುಗೊಳಿಸಿ ಎಂದು ರೈತರಿಗೆ ಬಿಎಸ್​ವೈ, ಬೊಮ್ಮಾಯಿ ಮತ್ತು ಎಚ್​ಡಿಕೆ ಸರ್ಕಾರದಲ್ಲೂ ನೋಟಿಸ್ ನೀಡಿದ್ದರು. ನಾನು ಎಲ್ಲಾ ನೋಟಿಸ್ ವಾಪಾಸ್ ಪಡೆಯಲು ಸೂಚಿಸಿ, ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ಪ್ರತಿಭಟನೆ ಮಾಡ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಗುಡುಗಿದರು.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *