ಧಾರವಾಡ: ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದ ರೈತರಿಗೆ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡಲು ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಎಫ್‌ಎಕ್ಯೂ ಗುಣಮಟ್ಟದ ಭತ್ತವನ್ನು ರೈತರಿಂದ ಪ್ರತಿ ಕ್ವಿಂಟಾಲ್‌ಗೆ ರೂ.2,300 ಮತ್ತು ಬಿಳಿಜೋಳವನ್ನು ರೂ. 3,371 ದರದಲ್ಲಿ ಖರೀದಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.
ಧಾರವಾಡ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಈ ಕುರಿತು ಮಾಹಿತಿ ನೀಡಿದ್ದಾರೆ. 2024-25ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಬೆಳೆದ ಎಫ್‌ಎಕ್ಯೂ ಗುಣಮಟ್ಟದ ಭತ್ತ ಹಾಗೂ ಬಿಳಜೋಳ ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರ ಖರೀದಿಸಲು ಸರ್ಕಾರದ ಆದೇಶದಂತೆ ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನಲ್ಲಿ ಬೆಳೆದ ಭತ್ತಕ್ಕೆ ರೂ. 2,300 ಹಾಗೂ ಗ್ರೇಡ್-ಎ ಭತ್ತಕ್ಕೆ ರೂ. 2,320 ನಿಗದಿಪಡಿಸಲಾಗಿದೆ. ಮತ್ತು ಎಫ್‌ಎಕ್ಯೂ ಗುಣಮಟ್ಟದ ಬಿಳಿಜೋಳ ಹೈಬ್ರಿಡ್‍ಗೆ ರೂ. 3,371, ಬಿಳಿಜೋಳ ಮಾಲ್ದಂಡಿಗೆ ರೂ. 3,421 ದರವನ್ನು ನಿಗದಿಪಡಿಸಲಾಗಿದೆ.
ಧಾರವಾಡ ಮತ್ತು ಕಲಘಟಗಿ ಭಾಗದಲ್ಲಿ 10,904 ಹೇಕ್ವೆರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು 1,09,040 ಕ್ವಿಂಟಲ್ ಭತ್ತದ ಇಳುವರಿಯನ್ನು ನೀರಿಕ್ಷಿಸಲಾಗಿದೆ. ಭತ್ತ ಖರೀದಿಗಾಗಿ ಧಾರವಾಡ ಮತ್ತು ಕಲಘಟಗಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರಿಗೆ, ರೈತರ ನೋಂದಣಿಯನ್ನು ಮಾಡಿಕೊಳ್ಳಲು ಹಾಗೂ ಖರೀದಿ ಕೇಂದ್ರಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಿಂದ ಧಾರವಾಡ ಎಪಿಎಂಸಿ ಹಾಗೂ ಕಲಘಟಗಿ ಎಪಿಎಂಸಿ ಖರೀದಿ ಕೇಂದ್ರಗಳಾಗಿವೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಭತ್ತದ ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿ ಹಾಗೂ ಉತ್ಪನ್ನ ಖರೀದಿಸಲು ನವೆಂಬರ 15 ರಿಂದ ಡಿಸೆಂಬರ್ 31, 2024ರವರೆಗೆ ಅವಧಿ ನಿಗದಿಗೊಳಿಸಲಾಗಿದೆ.
ಖರೀದಿಗೆ ಅವಶ್ಯವಿರುವ ತಂತ್ರಾಂಶವನ್ನು ಆಯುಕ್ತರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಎನ್‌ಐಸಿ ಸಹಯೋಗದೊಂದಿಗೆ ಸಿದ್ದಪಡಿಸತಕ್ಕದ್ದು ಹಾಗೂ ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ಅಗತ್ಯ ದತ್ತಾಂಶವನ್ನು ದಾಖಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

