ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಬಿ.ಸಿ. ಟ್ರಸ್ಟ್ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 607.71 ಕೋಟಿ ಲಾಭಾಂಶವನ್ನು ಧರ್ಮಸ್ಥಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಕೇತಿಕವಾಗಿ ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್‌ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೌಷನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ಹಿಂದೆ ಗ್ರಾಮೀಣಾಭಿವೃದ್ಧಿಯು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತವಾಗಿತ್ತು. ಸರ್ಕಾರದ ಹಣಕಾಸಿನ ನೆರವನ್ನು ಸ್ವಸಹಾಯ ಗುಂಪುಗಳ ಸದಸ್ಯರು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ, ಈಗ ಗ್ರಾಮೀಣಾಭಿವೃದ್ಧಿಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳಂತಹ ಉತ್ತೇಜನಾ ಸಂಸ್ಥೆಗಳೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ನೆರವಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಯಾರೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಯೋಚನೆ ಮಾಡಿಲ್ಲ. ₹600 ಕೋಟಿಗೂ ಹೆಚ್ಚು ಲಾಭಾಂಶ ವಿತರಿಸಿ ನಾವು ಅದನ್ನು ಸಾಧಿಸಿ ತೋರಿಸಿದ್ದೇವೆ. ಈ ಮಾದರಿಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

