ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, 10 ವರ್ಷಗಳಲ್ಲಿ 5,611 ಟಿಎಂಸಿ ಅಡಿ ನೀರು ಅವಿಭಜಿತ ಆಂಧ್ರ ಪ್ರದೇಶಕ್ಕೆ ಹರಿದು ಹೋಗಿದೆ. ರಾಜ್ಯಕ್ಕೆ ತನ್ನ ಪಾಲಿನ 1,170 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಕೃಷ್ಣಾ ನ್ಯಾಯಮಂಡಳಿ 2010ರಲ್ಲಿ ನೀಡಿದ ತೀರ್ಪಿನಲ್ಲಿ ಪ್ರತಿ ವರ್ಷ 177 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ನೀಡಿದೆ. ಮೂರನೇ ಹಂತದ ಯೋಜನೆ ಜಾರಿಯಾಗಿದ್ದರೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಯ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯ ಆಗುತ್ತಿತ್ತು.
ಆಲಮಟ್ಟಿ ಜಲಾಶಯದ ಈಗಿನ ಗೇಟಿನ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿ, ನ್ಯಾಯಮಂಡಳಿ ತೀರ್ಪಿನಂತೆ ನೀರಿನ ಸಂಗ್ರಹ ಹೆಚ್ಚಿಸಿಕೊಳ್ಳಬೇಕಿದೆ. ಹಿನ್ನೀರಿನಲ್ಲಿ ಮುಳುಗಡೆ ಆಗುವ 1.33 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಂಡು, ಮುಳುಗಡೆ ಆಗುವ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಈವರೆಗೆ 29,500 ಎಕರೆ ಮಾತ್ರ ಭೂಸ್ವಾಧೀನವಾಗಿದೆ.
ಮೂರನೇ ಹಂತದ ಯೋಜನೆಗೆ 2014-15ರಲ್ಲಿ ಅಂದಾಜು ಮಾಡಿದಾಗ, ₹51 ಸಾವಿರ ಕೋಟಿ ಅನುದಾನ ಬೇಕಿತ್ತು. 2018ರ ವೇಳೆಗೆ ₹78 ಸಾವಿರ ಕೋಟಿಗೆ ಏರಿತ್ತು. ಭೂಸ್ವಾಧೀನದ ಭೂಮಿ ಪರಿಹಾರ ನಾಲ್ಕು ಪಟ್ಟು ಹೆಚ್ಚಳ ಆಗಿರುವ ಕಾರಣ ಈಗ ಅದರ ವೆಚ್ಚ ₹1 ಲಕ್ಷ ಕೋಟಿ ದಾಟಲಿದೆ.
ಹತ್ತು ವರ್ಷಗಳ ಹಿಂದೆಯೇ ರೈತರ ಭೂಮಿಯ ಪಹಣಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಬರೆಯಲಾಗಿತ್ತು. ಇದರಿಂದ ರೈತರು ಭೂಮಿ ಮಾರಲು, ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವುದಾಗಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ ದೂರಿದರು.
ಕೇಂದ್ರ ಸರ್ಕಾರವು ಅಂತರರಾಜ್ಯ ವಿವಾದ ಎಂದು ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. ಗೆಜೆಟ್‌ನಲ್ಲಿ ಪ್ರಕಟಿಸಿದರೂ, ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

