ರಾಂಪುರ: ಸಮೀಪದ ಹಳ್ಳೂರ ಗ್ರಾಮದಲ್ಲಿ ಈಚೆಗೆ ₹36 ಲಕ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ವೈ.ಮೇಟಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳ ವಿಶೇಷ ಲೆಕ್ಕ ಶೀರ್ಷಿಕೆಯಡಿ ಮಂಜೂರಾದ ಅನುದಾನದಲ್ಲಿ ಹಳ್ಳೂರ- ಬೆನಕಟ್ಟಿ ರಸ್ತೆ ಅಭಿವೃದ್ಧಿಗೆ ₹6 ಲಕ್ಷ, ಸ್ಥಳೀಯ ಮಹಾಂತಪ್ಪ ಘೋರ್ಪಡೆ ಅವರ ಮನೆಯಿಂದ ಕೂಡಲಸಂಗಮ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ, ಹಳ್ಳೂರ- ಬನ್ನಿಕಟ್ಟಿ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ ಹಾಗೂ ಗ್ರಾಮದ ಪಶು ಚಿಕಿತ್ಸಾಲಯದಿಂದ ಪಿಕೆಪಿಎಸ್‌ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ₹10 ಲಕ್ಷ ಮೀಸಲಿಡಲಾಗಿದೆ’ ಎಂದು ಶಾಸಕರು ತಿಳಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಯಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೂ ಒತ್ತು ನೀಡುತ್ತಿದೆ. ವಿಪಕ್ಷಗಳು ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎನ್ನುವುದು ಸರಿಯಲ್ಲ. ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸದಾ ಸಿದ್ಧವಿದೆ ಎಂದರು.
ಮುಖಂಡರಾದ ಜಿ.ಜಿ.ಮಾಗನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲವ್ವ ಮಾದರ, ಮಹಾಂತೇಶ ಮಣಿನಾಗರ, ಬಸನಗೌಡ ಪರನಗೌಡ್ರ, ಬಿ.ಬಿ.ದೊಡ್ಡನಗೌಡರ, ಶರಣಪ್ಪ ಮಾಗನೂರ, ರತನಕುಮಾರ ವೈಜಾಪೂರ, ಎಸ್.ವೈ.ಶಿರೂರ, ಸಂತೋಷ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ಆರತಿ ಕಂಬಾರ, ಪಾರ್ವತಿ ಮೇಟಿ, ಮಹಾಂತೇಶ ಜನಗೌಡರ, ಮಹಾಂತೇಶ ಬಾದರದಿನ್ನಿ, ಎಸ್.ಎಸ್.ಸಜ್ಜನ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಂ.ರೇವಡಿ, ಗುತ್ತಿಗೆದಾರ ಕುಮಾರ ಬಿಂಜವಾಡಗಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





