ವಿಜಯಪುರ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ ವಿಜಯಪುರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಯಿತು.
ಕೆ.ಎಸ್.ಸಿ.ಎ ಸದಸ್ಯ ಮತ್ತು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರು ವಿಜಯಪುರದಲ್ಲಿ ಸುಂದರ ಕ್ರಿಕೆಟ್ ಕ್ರೀಡಾಂಗಣ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರೊಂದಿಗೆ ಈ ಹಿಂದೆ ಕೂಡ ಚರ್ಚಿಸಿದ್ದರು.
ನಗರದ ಹೊರವಲಯದ 2-3 ಜಾಗೆಗಳನ್ನು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಗುರುತಿಸುವ ಪ್ರಕ್ರಿಯೆ ನಡೆದಿದ್ದು, ಅದರನ್ವಯ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಭೂಬಾಲನ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಉಪವಿಭಾಗಾಧಿಕಾರಿ ಗುರುನಾಥ, ತಹಶೀಲ್ದಾರ್ ಚನಗೊಂಡ, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಇಂದು ಸ್ಥಳ ಪರಿಶೀಲನೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ‘ವಿಜಯಪುರದಿಂದ ವಿಮಾನ ಸಂಪರ್ಕ ಆರಂಭಗೊಂಡರೆ, ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಇಲ್ಲಿ ಆಯೋಜಿಸಬಹುದು. ದೂರದೃಷ್ಟಿಯಿಂದ ಇಲ್ಲಿ ಅತ್ಯತ್ತಮ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲಾಡಳಿತದ ಸಹಯೋಗದಿಂದ ಕ್ರೀಡಾಂಗಣ ಸ್ಥಳ ನಿಗದಿಪಡಿಸಿದರೆ, ಸರ್ಕಾರದಿಂದ ಅನುಮೋದನೆ ದೊರೆತರೆ, ಕೆ.ಎಸ್.ಸಿ.ಎ ವತಿಯಿಂದ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕೆ ಬಿಸಿಸಿ ವತಿಯಿಂದ ಹಣಕಾಸು ಒದಗಿಸಲಿದೆ’ ಎಂದರು.
ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ‘ಮೊದಲು ಸ್ಥಳ ನಿರ್ಣಯ ಆಗಬೇಕು. ನಂತರ ವಿವಿಧ ಇಲಾಖೆಗಳ ನೆರವಿನಿಂದ ಆ ಸ್ಥಳ ಸಮತಟ್ಟು ಆಗಬೇಕು. ನಂತರ ದಾನಿಗಳ ನೆರವು ಪಡೆಯೋಣ. ಸುಂದರ ಕ್ರೀಡಾಂಗಣ ನಿರ್ಮಾಣಗೊಂಡರೆ, ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ಯುವಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ’ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

