Breaking News

ಉತ್ತರ ಕರ್ನಾಟಕ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಏಳಲಿದೆ: ಶಾಸಕ ಸಿದ್ದು ಸವದಿ ಎಚ್ಚರಿಕೆ

ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ ಮಾಡುವುದನ್ನು ಜನ ಸಹಿಸುವುದಿಲ್ಲ. ಉತ್ತರ ಕರ್ನಾಟಕಕ್ಕೆ ತಾರತಮ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಕೂಗು ಏಳಲಿದೆ ಎಂದು ತೆರದಾಳು ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದ್ದಾರೆ.
ಸುವರ್ಣಸೌಧದಲ್ಲಿಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರಕರ್ನಾಟಕದ ಪ್ರಮುಖ ಸಮಸ್ಯೆ ಎಂದರೆ ಅದು ಕೃಷ್ಣಾ ಮೇಲ್ದಂಡೆ ಯೋಜನೆಯಾಗಿದೆ. ಆಲಮಟ್ಟಿ ಎತ್ತರದ ಕುರಿತು ಪದೇಪದೇ ಚರ್ಚೆಗಳಾಗುತ್ತಿವೆ. 1964 ರಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ 40 ವರ್ಷಗಳ ಬಳಿಕ ಪೂರ್ಣಗೊಂಡಿತ್ತು. ಆಲಮಟ್ಟಿ ಎತ್ತರ ಇನ್ನೂ ಬಾಕಿ ಇದೆ.
ಭೂಸ್ವಾಧೀನಕ್ಕೆ ಅಂತಿಮ ಹಂತದ ಸರ್ವೆ ಮಾಡಿ 2700 ಎಕರೆ ಪರಿಹಾರ ನೀಡಲಾಗಿದೆ. ಉಳಿದ ಭೂಮಿಗೆ ಹಣ ನೀಡಿಲ್ಲ. ಹೀಗಾಗಿ ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೀರಿನ ಸಂಗ್ರಹಣೆಯಿಂದ ಭೂಮಿ ಜೌಗು ಪ್ರದೇಶವಾಗಿದ್ದು, ಕೃಷಿಗೆ ಯೋಗ್ಯವಿಲ್ಲದಂತಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿವೆ. ಕಾವೇರಿ ನದಿ ಯೋಜನೆಗಳಿಗೆ ನೀಡುವಷ್ಟು ಆದ್ಯತೆಯನ್ನು ಕೃಷ್ಣಾ ನದಿ ಯೋಜನೆಗಳಿಗೆ ನೀಡುತ್ತಿಲ್ಲ. ಕಾವೇರಿ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದ್ದರೆ ರೈತರ ಪ್ರತಿಕ್ರಿಯೆಯೇ ಬೇರೆ ರೀತಿ ಇರುತ್ತಿತ್ತು. ಆದರೆ ನಮ ಭಾಗದಲ್ಲಿ ಒಗ್ಗಟ್ಟಿಲ್ಲದ ಕಾರಣ ಈವರೆಗೂ ಹಣ ಸಿಕ್ಕಿಲ್ಲ ಎಂದರು. ಸರ್ಕಾರ ನೀಡುತ್ತಿರುವ ಪರಿಹಾರಕ್ಕೂ, ಮಾರುಕಟ್ಟೆ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪರಿಹಾರ ಪಡೆದ ರೈತರು ಬೇರೆ ಕಡೆ ಜಮೀನು ಪಡೆಯಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಕೋಟ್ಯಾಂತರ ರೂ. ನೀಡಲಾಗುತ್ತಿದೆ. ರೈತರ ಜಮೀನುಗಳಿಗೆ ಕಡಿಮೆ ಹಣ ನೀಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಹಿನ್ನೀರಿನ ಪ್ರದೇಶದ ಜನರ ಬದುಕು ಧನನೀಯವಾಗಿದೆ. ಬಾಗಲಕೋಟೆ, ಬಿಜಾಪುರ ಜನರು ಪರಿತಪಿಸುತ್ತಿದ್ದಾರೆ. ಯೋಜನೆಯಿಂದ ಲಾಭ ಪಡೆಯುತ್ತಿರುವ ಜಿಲ್ಲೆಯ ಜನರು ನಮ ನೆರವಿಗೆ ಬರಬೇಕು. ಸರ್ಕಾರದ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಯೋಜನೆ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಸಚಿವರು ಇತ್ತ ಗಮನ ಹರಿಸಬೇಕು ಎಂದು ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಶಾಸಕರ ಮಾತು ಕೇಳುತ್ತಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು. ಚರ್ಚೆ ಮುಂದುವರೆಸಿದ ಸಿದ್ದು ಸವದಿ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರಿಗೆ ಮೋಸವಾಗುತ್ತಿದೆ. ತೂಕದಲ್ಲೂ ಮೋಸವಾಗುತ್ತಿದೆ. ವಂಚನೆ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *