Breaking News

ಬೆಂಗಳೂರು ರೈಲ್ವೆ ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಮರು ವಿನ್ಯಾಸ

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಮರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಒಟ್ಟು ₹ 1,200 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ಕೋರಿ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವ ಸಲ್ಲಿಸಲಾಗಿದೆ.
ಕೆಎಸ್‌ಆರ್‌ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣ ಎಂದು ನಾನಾ ಹೆಸರಿನಿಂದ ಕರೆಯಲಾಗುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ನಗರದ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಮೊದಲನೇಯದ್ದಾಗಿದೆ.
ಬೈಯಪ್ಪನಹಳ್ಳಿ ಎಸ್‌ಎಂವಿಟಿ ನಿಲ್ದಾಣವು ಈಗಾಗಲೇ ₹ 314 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿದೆ. ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ದೇಶದ ಮೊದಲ ರೈಲು ನಿಲ್ದಾಣ ಎಂಬ ಹಿರಿಮೆಗೆ ಅದು ಪಾತ್ರವಾಗಿದೆ. ₹ 380 ಕೋಟಿ ವೆಚ್ಚದಲ್ಲಿ ಯಶವಂತಪುರ ರೈಲು ನಿಲ್ದಾಣ ಮತ್ತು ₹ 480 ಕೋಟಿ ವೆಚ್ಚದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣಗಳು ಮೇಲ್ದರ್ಜೆಗೇರುತ್ತಿವೆ. ಕೆಎಸ್‌ಆರ್‌ ನಿಲ್ದಾಣವನ್ನೂ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಈಗ ಶುರುವಾಗಿದೆ.
ಕೆಎಸ್‌ಆರ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿತ್ತು. ಮಂಡಳಿಯು ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *