ಆಳಂದ: ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆ ಕಾಡುತ್ತಿರುವ ದಿನಗಳಲ್ಲಿ ರೈತರೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ಸೋಮವಾರ ಸಮತಾ ಲೋಕ ಶಿಕ್ಷಣ ಸಮಿತಿ, ಕಲಬುರಗಿ ಕೃಷಿ ಮಹಾವಿದ್ಯಾಲಯ ಸಹೋಗದಲ್ಲಿ ಹಮ್ಮಿಕೊಂಡ ಎರಡು ದಿನದ ಸಾಸಿರನಾಡಿನ ಕೃಷಿ ಜಾತ್ರೆ ಉದ್ಘಾಟಿಸಿ ಮಾತನಾಡಿದರು.
ಕಬ್ಬು, ಭತ್ತದಂತ ಬೆಳೆಗಳು ಹೆಚ್ಚು ನೀರು ಅವಲಂಬಿತ ಬೆಳೆಗಳು. ಆದರೆ ಬೆಳಗಾಂವ, ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಹೆಚ್ಚಿದರೆ, ಕಲಬುರಗಿ, ಯಾದಗರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇಳುವರಿ ಕಡಿಮೆಯಾಗಿದೆ. ಪರ್ಯಾಯವಾಗಿ ತೋಟಗಾರಿಕೆ, ತರಕಾರಿ, ಹೈನುಗಾರಿಕೆ ಹಾಗೂ ಪುಷ್ಪ ಬೆಳೆಗಳು ಬೆಳೆಯುವ ಮೂಲಕ ಹೆಚ್ಚು ಲಾಭ ಹೊಂದಲು ಸಾಧ್ಯವಿದೆ’ ಎಂದು ಹೇಳಿದರು.
ರಾಜ್ಯದಲ್ಲಿ ರೈತರಿಗೆ ಸರ್ಕಾರದಿಂದ ಉಚಿತ ವಿದ್ಯುತ್, ನದಿ, ಅಣೆಕಟ್ಟೆಗಳ ನೀರು, ರಸಗೊಬ್ಬರ ಹಾಗೂ ಶೂನ್ಯಬಡ್ಡಿದರದಲ್ಲಿ ಸಾಲದ ನೆರವು ಜತೆಗೆ ವಿವಿಧ ಕೃಷಿ ಉಪಕರಣಗಳ ಸೌಲಭ್ಯಗಳಿವೆ. ರೈತರೂ ಸಾಂಪ್ರದಾಯಿಕ ಕೃಷಿ ಪದ್ಧತಿ ಅವಲಂಬಿಸದೆ ಹೊಸ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆಳಂದ ತಾಲ್ಲೂಕಿನಲ್ಲಿ 32 ಸಹಕಾರಿ ಸಂಘಗಳಿದ್ದು, ರೈತರಿಗೆ ಹೈನುಗಾರಿಕೆ ಹೆಚ್ಚಿನ ನೆರವು ನೀಡಬೇಕು. ಸೋಲಾರ್ ವಿದ್ಯುತ್ ಬಳಕೆ, ಜಲ ಸಂವರ್ಧನೆ ಹಾಗೂ ಹೈನುಗಾರಿಕೆ ಹೆಚ್ಚಳದಿಂದ ರೈತರಿಗೆ ಕೃಷಿಯಲ್ಲಿ ಅನುಕೂಲವಾಗಬೇಕು’ ಎಂದು ಹೇಳಿದರು.
ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಮಣ್ಣು, ಮರ ಹಾಗೂ ನೀರು ಕೃಷಿಯ ಜೀವಾಳವಾಗಿದ್ದು, ರೈತರೂ ಹೆಚ್ಚಿನ ಲಾಭಕ್ಕಾಗಿ ನಮ್ಮ ಪ್ರಾಕೃತಿಕ ಸಂಪತ್ತು ಹಾಳು ಮಾಡದಂತೆ ಕಾಳಜಿವಹಿಸಬೇಕು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಧಾರವಾಡದ ವಿಶ್ರಾಂತ ಕುಲಪತಿ ವಿ.ಐ. ಬೇಣಗಿ, ಮುಖಂಡ ಅರುಣಕುಮಾರ ಪಾಟೀಲ, ಕೃಷಿ ವಿಜ್ಞಾನಿ ರಾಜಶೇಖರ ಬಸನಾಯಕ ಮಾತನಾಡಿದರು.
ಹಿರಿಯ ಹೋರಾಟಗಾರ ವಿನಾಯಕ ಪಾಟೀಲ, ಅರಣ್ಯ ವಿಭಾಗದ ಜಿಲ್ಲಾ ಉಪ ನಿರ್ದೇಶಕ ಸುಮಿತಕುಮಾರ ಪಾಟೀಲ, ಸಾಗರ ತಾವಡೆ, ಸಮದ್ ಪಟೇಲ, ಎಂ. ಧನೋಜಿ, ರಾಜು ತೆಗ್ಗಳ್ಳಿ, ಸಂತೋಷ ಇನಾಮದಾರ, ಎಸ್. ಪ್ರಕಾಶ ಬಾಬು, ಎಸ್.ಡಿ. ಅವಟೆ, ಎಂ.ಎ. ಮಠಪತಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

