ಮಂಡ್ಯ : ರೈತರಿಗೆ ಕೃಷಿಯ ಮಾಹಿತಿ ನೀಡಿ ಕೃಷಿ ಅಧ್ಯಯನ ಮಾಡಲು ಸಹಕಾರಿಯಾಗುವ ಕೃಷಿ ವಿಶ್ವವಿದ್ಯಾಲಯವನ್ನು ಜಿಲ್ಲೆಯ ವಿ.ಸಿ.ಫಾರಂ ಆವರಣದಲ್ಲಿ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ನಾಗಮಂಗಲದ ದೇವಲಾಪುರದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಲು ಮಂಡ್ಯ ಜಿಲ್ಲೆಯಿಂದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ತೆರಳಬೇಕಿತ್ತು. ರೈತರು ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಅವಶ್ಯಕತೆಯನ್ನು ಮನಗಂಡು ಪ್ರಾರಂಭಿಸಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ವಿವಿಧ ರೀತಿಯ ತಳಿಗಳು, ಬೆಳೆಗೆ ಬಳಸಬೇಕಿರುವ ರಸಗೊಬ್ಬರ ಸೇರಿದಂತೆ ಪ್ರತಿಯೊಂದು ಮಾಹಿತಿ ಸಂಶೋಧಕರಿಂದ ದೊರಕಲಿದೆ ಎಂದು ಮಾಹಿತಿ ನೀಡಿದರು.
ಸಂಕ್ರಾಂತಿ ಹಬ್ಬ ರೈತರು ತಾವು ಬೆಳೆದ ಭತ್ತ, ರಾಗಿ, ಕಾಳುಗಳನ್ನು ಒಟ್ಟುಗೂಡಿಸಿ, ಪೂಜೆ ಮಾಡಿ ಮನೆಗೆ ಬೇಕಾದಷ್ಟನ್ನು ಶೇಖರಿಸಿ ಉಳಿದದನ್ನು ಮಾರಾಟ ಮಾಡುತ್ತಾರೆ. ರೈತರಿಗೆ ಉತ್ತಮ ಆದಾಯ ಬರಲಿ ಎಂದು ಅವರು ಹಲವಾರು ತಿಂಗಳಿಂದ ಶ್ರಮಪಟ್ಟಿ ಪಡೆದ ಫಲವನ್ನು ಪೂಜಿಸುವ ಹಬ್ಬ ಸಂಕ್ರಾಂತಿ ಹಬ್ಬ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, 17 ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕನಿಷ್ಠ 3 ಬಾರಿ ಭೇಟಿ ನೀಡಿ ಕೃಷಿಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ. 84 ಲಕ್ಷ ಹೆಕ್ಟೇರ್ ಬಿತ್ತನೆ ಕಾರ್ಯಕ್ಕಾಗಿ 6 ಲಕ್ಷ ಟನ್ ಬಿತ್ತನೆ ಬೀಜವನ್ನು ರೈತರಿಗೆ ಯಾವುದೇ ತೊಂದರೆಯಿಲ್ಲದೇ ಒದಗಿಸಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ 1,47,000 ರೈತರಿಗೆ1,400 ಕೋಟಿ ರೂ. ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗಿದೆ. ಕಳೆದ ವರ್ಷ ಮೈಶುಗರ್ ಪುನಶ್ಚೇತನಕ್ಕೆ 50 ಕೋಟಿ ರೂ. ಹಣವನ್ನು ನೀಡಲಾಗಿತ್ತು. ಈ ಬಾರಿ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಕಾರಣಕರ್ತರಾದ ಹಾಗೂ ಜಿಲ್ಲೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿರುವ ಕೃಷಿ ಸಚಿವರಿಗೆ ಧನ್ಯವಾದ ಅರ್ಪಿಸಿದರು.
ಮದ್ದೂರು, ಮಳವಳ್ಳಿ ಹಾಗೂ ಕೊಪ್ಪದ ಕೊನೆಯ ಭಾಗದ ಕೃಷಿ ಚಟುವಟಿಕೆಗೆ ನೀರು ತಲುಪಿಸಲು ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯನ್ನು 1,400 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಸ್ಟಾರ್ ಚಂದ್ರು, ಹುಚ್ಚೇಗೌಡ, ಗ್ರಾಮ ಪಂಚಾಯತ್ ಆಧ್ಯಕ್ಷೆ ಸಿದ್ದಲಿಂಗಮ್ಮ, ಜ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

