ಹುಬ್ಬಳ್ಳಿಯಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಸಿಐಡಿಗೆ ವಹಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಅನುಮತಿ ಪಡೆದ ನಂತರ ಸಿಐಡಿಗೆ ತನಿಖೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು, ಘಟನೆಯ ಸತ್ಯಾಸತ್ಯತೆಗಳನ್ನು ಸಿಐಡಿ ಸಂಪೂರ್ಣವಾಗಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಯಾರು ತಪ್ಪಿತಸ್ಥರು, ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆ ಎಂಬುದನ್ನು ಪರಿಶೀಲಿಸಿ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು. ಈ ಪ್ರಕರಣದಲ್ಲಿ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿಲ್ಲ, ಪೊಲೀಸರು ಕೂಡಲೇ ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಮಹಿಳೆಯೇ ಸ್ವಯಂ ವಿವಸ್ತ್ರಗೊಂಡಿದ್ದಾಳೆ ಎಂಬ ವಿವರಗಳು ಲಭ್ಯವಾಗಿವೆ. ಆದರೆ, ಈ ಬಗ್ಗೆ ಇನ್ನೂ ಸಮಗ್ರ ತನಿಖೆ ಅಗತ್ಯವಿದೆ. ತನಿಖೆಯ ನಂತರವೇ ಸತ್ಯ ಸ್ಪಷ್ಟವಾಗಲಿದೆ ಎಂದು ಪರಂ ತಿಳಿಸಿದರು. ಈ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ಡಿ.ಕೆ.ಶಿವಕುಮಾರ್ ಅವರು ಜವಾಬ್ದಾರಿಯುತ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು. ಕುಮಾರಸ್ವಾಮಿ ಅವರ ಹೇಳಿಕೆಯ ಪ್ರಕಾರ ಅಧಿಕಾರಗಳ ವಿಷಯದಲ್ಲಿ ಬೇರೆ ವ್ಯಾಖ್ಯಾನ ಇರಬಹುದು. ಆದರೆ, ಸರ್ಕಾರದ ಪ್ರತಿನಿಧಿಯಾಗಿ ಅವರು ಸ್ಥಳಕ್ಕೆ ಹೋಗಿರುವುದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದರು. ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಅವರು ಮೃತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಇದನ್ನು ತಪ್ಪು ಎನ್ನುವುದಾದರೆ ಅರ್ಥವೇನು? ಎಂದು ಪರಂ ಪ್ರಶ್ನಿಸಿದರು. ನಾನು ಇಲಾಖೆಯ ಸಚಿವನಾಗಿ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹೋಗಿದ್ದರೆ, ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬರುವ ಸಾಧ್ಯತೆ ಇತ್ತು. ತನಿಖೆಗೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂಬ ಕಾರಣದಿಂದಲೇ ನಾವು ಯೋಚಿಸಿ ಕ್ರಮ ಕೈಗೊಳ್ಳುತ್ತೇವೆ. ಅದೇ ಕಾರಣದಿಂದ ನಾನು ಇನ್ನೂ ಬಳ್ಳಾರಿಗೆ ಭೇಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

