ರಾಮನಗರ: ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಎಂದು ಗುರುತಿಸಲಾಗಿದೆ. ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ಅಲ್ಲಿಯೇ ವಾಸವಾಗಿದ್ದ. ಮೂರು ದಿನಗಳ ಹಿಂದೆ ಮನೆ ಪಕ್ಕದಲ್ಲಿದ್ದ ಸಂಜಯ್ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿದ್ದು, ಕೆಮ್ಮಿದ ವಿಚಾರಕ್ಕೆ ಜಗಳ ತೀವ್ರಗೊಂಡಿದೆ ಎನ್ನಲಾಗಿದೆ. ಈ ವೇಳೆ ಸಂಜಯ್, ಹೊಂಬಯ್ಯ (ಹೊಂಬೆಗೌಡ), ವಿಜಯ್ ಸೇರಿದಂತೆ ಇತರರು ಸೇರಿ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿನೋದ್ ನನ್ನು ತಕ್ಷಣ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

