ನಗರದ ಮುಲುಂಡ್ ಪ್ರದೇಶದಲ್ಲಿ ನಡೆದ ಮೆಟ್ರೋ ನಿರ್ಮಾಣ ದುರಂತದ ಬಳಿಕ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗದ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಜನೆಗೆ ಸಂಬಂಧಿಸಿದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಜೊತೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಸಲಹೆಗಾರರಿಗೆ ಒಟ್ಟು 6 ಕೋಟಿ ರೂ ದಂಡ ವಿಧಿಸಲಾಗಿದೆ. ಫೆಬ್ರವರಿ 14 ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ನಿರ್ಮಾಣದಲ್ಲಿದ್ದ ಸ್ಲ್ಯಾಬ್ ಕೆಳಗೆ ಸಾಗುತ್ತಿದ್ದ ಆಟೋ ಮತ್ತು ಕಾರಿನ ಮೇಲೆ ಬಿದ್ದಿತ್ತು. ಈ ದುರಂತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಿಸಿದ ಇಲಾಖೆಗೆ ಎಚ್ಚರಿಕೆ ನೀಡಲಾಗಿದೆ. ಮೃತರ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ಘೋಷಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಸಂಪೂರ್ಣ ತನಿಖೆ ನಡೆಸುವುದಾಗಿ ಸರ್ಕಾರ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

