ನಗರದ ಇಂದಿರಾನಗರದಲ್ಲಿ ನಡೆದಿದ್ದ ಎಟಿಎಂ ದರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ 23 ವರ್ಷದ ರಾಜೇಂದ್ರ ಸಿಂಗ್ ಎಂಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 10ರ ಮಧ್ಯರಾತ್ರಿ, ಇಂದಿರಾನಗರ ಡಬಲ್ ರೋಡ್ ಸಮೀಪದ ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಈತ ಯತ್ನಿಸಿದ್ದ. ಆರೋಪಿ ಶಟ್ಟರ್ ಬಂದ್ ಮಾಡಿ ಒಳಗೆ ಪ್ರವೇಶಿಸಿ, ಕಟ್ಟಿಂಗ್ ಮಷೀನ್ ಬಳಸಿ ಯಂತ್ರ ಒಡೆದು ಹಣ ಕಸಿಯಲು ಯತ್ನಿಸಿದ್ದಾನೆ. ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆ ಮತ್ತು ಟೇಪ್ ಬಳಸಿ ಮುಚ್ಚುವ ಪ್ರಯತ್ನವೂ ಮಾಡಿದ್ದಾನೆ. ಆರೋಪಿಯ ಬಂಧನದ ನಂತರ ವಿಚಾರಣೆ ವೇಳೆ, ತಾನು ನಾಗಾರ್ಜುನ ಹೋಟೆಲ್‌ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದೆನೆಂದು ಆರೋಪಿ ಹೇಳಿಕೊಂಡಿದ್ದಾನೆ. ಆದರೆ ಎಟಿಎಂ ಯಂತ್ರವನ್ನು ಒಡೆಯಲು ಸಾಧ್ಯವಾಗದೇ ಯಾವುದೇ ಹಣ ಪಡೆದುಕೊಳ್ಳಲು ವಿಫಲನಾಗಿದ್ದಾನೆ. ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

