ಹಾಸನ: ಜೀವನದ ಸಂಧ್ಯಾಕಾಲದಲ್ಲಿ ಹೆತ್ತ ಮಕ್ಕಳು ನೋಡಿಕೊಳ್ಳಲಿಲ್ಲವೆಂದು ವೃದ್ಧ ದಂಪತಿ ಸಾವಿನ ಕದ ತಟ್ಟಿದ್ದಾರೆ. ರೈಲಿಗೆ ಸಿಲುಕಿ ವೃತ್ತ ದಂಪತಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ಶನಿವಾರ ರಾತ್ರಿ ನಡೆದಿದೆ. ಸೋಮವಾರಪೇಟೆ ತಾಲೂಕು ಹಾರೆಹೊಸೂರು ಗ್ರಾಮದ ಡೇನಿಯಲ್(80), ಮೇರಿ(73) ಮೃತಪಟ್ಟವರು. ಹಾಸನದ ಕರಿಗೌಡ ಕಾಲೋನಿ ಸಮೀಪ ರೈಲಿಗೆ ತಲೆ ಕೊಟ್ಟಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಡೇನಿಯಲ್ ಅವರಿಗೆ ಇಬ್ಬರು ಪುತ್ರರಿದ್ದು ಇಬ್ಬರಿಗೂ ಮದುವೆಯಾಗಿದೆ. ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮತ್ತೊಬ್ಬರು ಹಾರೆಹೊಸೂರಿನಲ್ಲಿ ಕಾಫಿ ತೋಟ ನೋಡಿಕೊಂಡಿದ್ದಾರೆ. ಆದರೆ ಪೋಷಕರ ಆರೈಕೆ ಮಾಡಲು ಇಬ್ಬರೂ ಹಿಂದೇಟು ಹಾಕಿದ್ದರು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಕೊಡುತ್ತಿರಲಿಲ್ಲ. ಅನಾರೋಗ್ಯದ ವೇಳೆ ಆಸ್ಪತ್ರೆಗೆ ಕರೆದೊಯ್ಯುತ್ತಿರಲಿಲ್ಲ. ವಿರಾಜಪೇಟೆಯ ವೃದ್ಧಾಶ್ರಮ ಸೇರಿದ್ದ ದಂಪತಿ ಶನಿವಾರ ಅಲ್ಲಿಂದ ಕೆಎಸ್‌ಆರ್ಟಿಸಿ ಬಸ್ ನಲ್ಲಿ ಹಾಸನಕ್ಕೆ ಬಂದಿದ್ದಾರೆ. ಹೊಸ ಬಸ್ ನಿಲ್ದಾಣ ಸಮೀಪ ರೈಲಿಗೆ ತಲೆ ಕೊಟ್ಟಿದ್ದಾರೆ ಎನ್ನಲಾಗಿದೆ. ರೈಲ್ವೇ ಪೊಲೀಸರು, ಹಾಸನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

