ಮಂಗಳೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೇರಳ ನೋಂದಣಿಯ ಟಿಪ್ಪರನ್ನು ಕಂಕನಾಡಿ ನಗರ ಪೊಲೀಸರು ಬೆನ್ನಟ್ಟಿದ್ದು, ನೇತ್ರಾವತಿ ಸೇತುವೆಯ ಬಳಿಯ ಆಡಂ ಕುದ್ರು ಎಂಬಲ್ಲಿ ಚಾಲಕ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಿದ್ದು, ಅಂದಾಜು 5 ಸಾವಿರ ರೂ.ಮೌಲ್ಯದ ಮರಳು ಮತ್ತು ಸುಮಾರು 3 ಲಕ್ಷ ರೂ. ಮೌಲ್ಯದ ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ಕಂಕನಾಡಿ ನಗರ ಪೊಲೀಸರು ಗಸ್ತಿನಲ್ಲಿದ್ದಾಗ ಮಹಾಕಾಳಿಪಡ್ಪು ರಸ್ತೆ ಕಡೆಯಿಂದ ಟಿಪ್ಪರನ್ನು ಚಾಲಕ ರಾ.ಹೆ. 66ಕ್ಕೆ ಚಲಾಯಿಸಿಕೊಂಡು ಬಂದಿದ್ದಾನೆ. ಪೊಲೀಸರನ್ನು ಕಂಡು ನೇತ್ರಾವತಿ ಸೇತುವೆ ಕಡೆ ಚಲಾಯಿಸಿಕೊಂಡು ಹೋಗಿದ್ದು, ಪೊಲೀಸರು ಹಿಂಬಾಲಿಸಿಕೊಂಡು ಹೋದಾಗ ಆಡಂಕುದ್ರು ಬಳಿ ರಸ್ತೆ ಬದಿ ನಿಲ್ಲಿಸಿ, ಕೀಯನ್ನು ಟಿಪ್ಪರ್‌ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

