ಬೆಳ್ತಂಗಡಿ: ಸುಮಾರು ಒಂದೂವರೆ ದಶಕದ ಹಿಂದೆ ಉಜಿರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಚಾರ್ಮಾಡಿ ನಿವಾಸಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2009ರ ಮಾರ್ಚ್ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ರಥಬೀದಿ ಎಂಬಲ್ಲಿ ಮಾದಕ ದ್ರವ್ಯ ಮಾರಾಟದ ಜಾಲವೊಂದು ಸಕ್ರಿಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅಂದಿನ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಬಿ.ಜಿ. ಸುಬ್ಬಾಪುರಮಠ್ ನೇತೃತ್ವದ ತಂಡ ದಾಳಿ ನಡೆಸಿದಾಗ, ಚಾರ್ಮಾಡಿ ನಿವಾಸಿ ಟಿ.ಇ ಜೋಸೆಫ್ (42) ಎಂಬಾತ 1.500 ಕಿ.ಗ್ರಾಂ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದು ಪತ್ತೆಯಾಗಿತ್ತು. ಅಂದು ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ 50,000 ರೂ.ಗಳಾಗಿದ್ದು, ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಅವರು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಏಪ್ರಿಲ್ 10ರಂದು ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದರು. ಏಪ್ರಿಲ್ 16ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಪೀಠವು, NDPS ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಿಗೆ ಒಟ್ಟು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಎರಡು ತಿಂಗಳ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ. ಇದಲ್ಲದೆ, ಸೆಕ್ಷನ್ 32-B(f) ಅಡಿಯಲ್ಲಿ ಪ್ರತ್ಯೇಕವಾಗಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

