ಧಾರವಾಡ : ಗಾಂಜಾ ಪ್ರಕರಣದಲ್ಲಿ ಪೊಲೀಸ್ ಕಿರುಕುಳದಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ವಿದ್ಯಾಗಿರಿ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ತಲೆದಂಡವಾಗಿದೆ. ಈಗಾಗಲೇ ಮೂವರು ಪೇದೆಗಳನ್ನು ಅಮಾನತ್ತು ಮಾಡಲಾಗಿದ್ದು , ಇದೀಗ ಹಿರಿಯ ಪೊಲೀಸ್ ಅಧಿಕಾರಿಯನ್ನು ಪೊಲೀಸ್ ಆಯುಕ್ತರು ಅಮಾನತ್ತು ಮಾಡಿದ್ದಾರೆ. ಒಂದು ದಿನ ಆದಿತ್ಯ ಮ್ಯಾಗೇರಿ ಎಂಬ ಪದವಿ ವಿದ್ಯಾರ್ಥಿಯನ್ನು ಠಾಣೆಯಲ್ಲಿ ಕುಳ್ಳಿರಿಸಿ ಆತನಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ದುಡ್ಡು ಕೇಳಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದ ಮನನೊಂದ ಆದಿತ್ಯ ಮ್ಯಾಗೇರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಬುಧವಾರ ಅಮಾನತು ಮಾಡಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಆದೇಶ ಹೊರಡಿಸಿದ್ದರು . ಆದರೆ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಅಮಾನತ್ತು ಮಾಡುವುದು ಸರಿಯಲ್ಲ. ಮೇಲಿನ ಅಧಿಕಾರಿಗಳಿಗೆ ಶಿಕ್ಷೆಯಾಗಲಿ ಎಂಬ ಒತ್ತಡ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಆಯುಕ್ತ ಶಶಿಕುಮಾರ್ ಇದೀಗ ವಿದ್ಯಾಗಿರಿ ಇನ್ಸಪೆಕ್ಟರ್ ಮೊಹ್ಮದರಫೀಕ ತಹಶೀಲ್ದಾರ ಅವರು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ . ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸೇರಿದಂತೆ ಸಮಾನ ಮನಸ್ಕರು , ಕೇವಲ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿದರೆ ಸಾಲದು . ಹಿರಿಯ ಅಧಿಕಾರಿಗಳ ತಲೆದಂಡ ಆದಾಗಲೇ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು . ಅದಕ್ಕಾಗಿ ನೇರವಾಗಿ ಪೊಲೀಸ್ ಆಯುಕ್ತರೇ ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ತಲೆದಂಡ ಮಾಡಬೇಕು ಎಂದು ಎರಡು ದಿನಗಳ ಗಡುವು ಸರಕಾರಕ್ಕೆ ನೀಡಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

