ಬೆಂಗಳೂರು : ನಗರದಲ್ಲಿ ತಡರಾತ್ರಿ ನಡುರಸ್ತೆಯಲ್ಲೇ ಮದ್ಯ ಸೇವನೆ ಮಾಡುತ್ತಿದ್ದ ಯುವಕರು ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮೇ 1ರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶವಾಣಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ನೈಟ್ ಬೀಟ್ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ರುದ್ರಪ್ಪ ಅವರು ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ ನಾಲ್ವರನ್ನು ಗಮನಿಸಿದ್ದಾರೆ. ಬಳಿಕ ಅವರ ಬಳಿ ತೆರಳಿ ಮದ್ಯಸೇವನೆ ಮಾಡುತ್ತಿದ್ದ ಬಗ್ಗೆ ಪ್ರಶ್ನೆ ಮಾಡಿದಾಗ, ಯುವಕರು ಕಾನ್ಸ್‌ಟೇಬಲ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ನಾಲ್ವರು ಆರೋಪಿಗಳು ಅವಾಚ್ಯ ಪದಗಳಿಂದ ಕರ್ನಾಟಕ ಪೊಲೀಸರ ಬಗ್ಗೆ ನಿಂದಿಸಿ, ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಕಾನ್ಸ್‌ಟೇಬಲ್ ಬೈಕ್ ಕೀ ಕಸಿದುಕೊಂಡು, ಅವರ ಕೈ ತಿರುಚಿ ಅಟ್ಟಹಾಸ ಮೆರೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ನಾಲ್ವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

