ಬೆಂಗಳೂರು: ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಾರತ್‌ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ರಾಮು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 10ರಂದು ರಾಮು ಮತ್ತು ಪರಶುರಾಮ್ ಯಲ್ಲಪ್ಪ ಮಂಗಳಗಟ್ಟಿ(25) ನಡುವೆ ಮೊಬೈಲ್ ವಿಚಾರಕ್ಕೆ ಜಗಳವಾಗಿತ್ತು. ಮದ್ಯ ಸೇವಿಸಿ ಬಂದಿದ್ದ ರಾಮು, ಪರಶುರಾಮ್ ಅವರ ಮೊಬೈಲ್‌ನ್ನು ತಮಾಷೆಗೆಂದು ಬಚ್ಚಿಟ್ಟಿದ್ದ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದು, ಸಿಟ್ಟಿಗೆದ್ದ ರಾಮು ಅಡುಗೆಮನೆಯ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಪರಶುರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

