ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಜೀಪನ್ನು ಕಳವು ಮಾಡಿದ್ದ ಕೇರಳ ಮೂಲದ ನದೀಮ್ (23) ಎಂಬ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿದ್ದಾರೆ. ಪಡೀಲ್‌ನ ಅರಣ್ಯ ಇಲಾಖೆಯ ವಸತಿಗೃಹದ ಬಳಿ ನಿಲ್ಲಿಸಿದ್ದ ಜೀಪಿನ ಗಾಜು ಒಡೆದು, ಒಳಗಿದ್ದ ಹೆಚ್ಚುವರಿ ಕೀ ಬಳಸಿ ಆತ ವಾಹನವನ್ನು ಕದ್ದೊಯ್ದಿದ್ದ. ಜೀಪಿನ ಜಿಪಿಎಸ್ ಲೊಕೇಶನ್ ಟ್ರ್ಯಾಕ್ ಮಾಡಿದ ಅಧಿಕಾರಿಗಳು ಕುಂದಾಪುರದ ಕೋಟೇಶ್ವರ ಸಮೀಪ ವಾಹನ ಇರುವುದನ್ನು ಪತ್ತೆಹಚ್ಚಿದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿದರೂ, ಜೀಪನ್ನು ಅಡ್ಡಗಟ್ಟಿ ವಶಕ್ಕೆ ಪಡೆದು ಬಳಿಕ ಪೊಲೀಸರಿಗೆ ಒಪ್ಪಿಸಿದರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಂಡು ಹಣ ನೀಡದೇ ಪರಾರಿಯಾಗಿದ್ದೂ ಬೆಳಕಿಗೆ ಬಂದಿದೆ. ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಆತ ವೃತ್ತಿಪರ ಕಳ್ಳನಾಗಿರುವ ಶಂಕೆಯ ಮೇರೆಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

