ಬೆಂಗಳೂರು: ನಗರದಲ್ಲಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಯಶಸ್ಸು ಸಿಕ್ಕಿದೆ. ಚೂಡಿದಾರ್ ಬಟ್ಟೆಗಳ ನಡುವೆ ಎಂಡಿಎಂಎ (MDMA) ಕ್ರಿಸ್ಟಲ್ಗಳನ್ನು ಅಡಗಿಸಿ ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಮಹಿಳೆಯರ ಉಡುಪುಗಳನ್ನು ಬಳಸುವುದರಿಂದ ಯಾರಿಗೂ ಅನುಮಾನ ಬಾರದಂತೆ ಈ ಅಕ್ರಮ ದಂಧೆ ನಡೆಸಲಾಗುತ್ತಿತ್ತು. ಬಂಧಿತ ಆರೋಪಿಗಳನ್ನು ಸಾಹೀಲ್ ಕುಮಾರ್, ಸತ್ಯಂ, ಕಲೀಮ್ ಹಾಗೂ ಕನ್ನಯ್ಯ ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ ದೆಹಲಿಯಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿಂದೆ ಬಂಧಿತನಾಗಿದ್ದ ವಿಕ್ಟರ್ ಹಾಗೂ ಮೋಸಸ್ ವಿಚಾರಣೆಯಿಂದ ಈ ಜಾಲದ ಸುಳಿವು ಸಿಕ್ಕಿತ್ತು. ಆರೋಪಿಗಳಿಂದ 26.60 ಕೋಟಿ ರೂ. ಮೌಲ್ಯದ 12.925 ಕೆಜಿ ಎಂಡಿಎಂಎ ಮತ್ತು 60 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ ರಾಜಸ್ಥಾನದಿಂದ ಡ್ರಗ್ಸ್ ಸಾಗಿಸುತ್ತಿದ್ದ ಲುಂಬುರಾಮ್ ಮತ್ತು ಅನುಪ್ ರಾಮ್ ಬಂಧಿತರಾಗಿದ್ದು, ಅವರಿಂದ 7 ಕೆಜಿ ಆಫೀಮು ಹಾಗೂ 225 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

