ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಅಪರಿಚಿತರು ಮಕ್ಕಳಿಗೆ ಚಾಕೊಲೇಟ್, ಚಿಪ್ಸ್ ಸೇರಿದಂತೆ ತಿನಿಸುಗಳ ಆಸೆ ತೋರಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಯತ್ನಿಸಿರುವ ಘಟನೆಗಳು ಆತಂಕ ಮೂಡಿಸಿವೆ. ವೈಭವಲಕ್ಷ್ಮಿ ಬಡಾವಣೆ ಹಾಗೂ ಛತ್ರ ರಸ್ತೆ ಸಮೀಪ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಮಕ್ಕಳನ್ನು ಮಾತಿಗೆ ಸೆಳೆದು ತಿನಿಸು ನೀಡಲು ಯತ್ನಿಸಿದ್ದು, ಮಕ್ಕಳು ಸಮಯಪ್ರಜ್ಞೆಯಿಂದ ಮನೆಗೆ ಓಡಿ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಪರಿಚಿತರಿಂದ ಆಹಾರ ಅಥವಾ ಉಡುಗೊರೆ ಸ್ವೀಕರಿಸದಂತೆ ಮಕ್ಕಳಿಗೆ ತಿಳಿಹೇಳಬೇಕು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸ್ ಅಥವಾ ಪೋಷಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

