ಬೆಂಗಳೂರು: ಮಾದಕ ವಸ್ತುಗಳ ಮಾರಾಟ ಹಾಗೂ ಪೂರೈಕೆ ವಿರುದ್ಧ ಪೊಲೀಸರು ನಡೆಸುತ್ತಿರುವ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೊ’ ಕಾರ್ಯಾಚರಣೆಯಲ್ಲಿ 39 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ₹55.80 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ 8 ವಿದೇಶಿಗರು, 21 ಹೊರರಾಜ್ಯದವರು ಹಾಗೂ 10 ಸ್ಥಳೀಯರು ಸೇರಿದ್ದಾರೆ. ಅಮೃತಹಳ್ಳಿ ಪೊಲೀಸರು ₹28.88 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿ ದೆಹಲಿ ಹಾಗೂ ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಕೆಐಎ ಠಾಣೆ ಪೊಲೀಸರು ₹3 ಕೋಟಿ ಮೌಲ್ಯದ 3 ಕೆ.ಜಿ ಹೈಡ್ರೊ ಗಾಂಜಾ ವಶಪಡಿಸಿಕೊಂಡು ಮಹಾರಾಷ್ಟ್ರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಯಲಹಂಕ ಪೊಲೀಸರು ನಾಲ್ವರನ್ನು ಬಂಧಿಸಿ 794 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಒಟ್ಟು 21 ಕೆ.ಜಿ. 641 ಗ್ರಾಂ ಎಂಡಿಎಂಎ, 738 ಗ್ರಾಂ ಕೊಕೇನ್, 4 ಕೆ.ಜಿ. 493 ಗ್ರಾಂ ಹೈಡ್ರೊ ಗಾಂಜಾ, 184 ಕೆ.ಜಿ. 625 ಗ್ರಾಂ ಗಾಂಜಾ ಹಾಗೂ 25 ಗ್ರಾಂ ಮಾರ್ಫಿನ್ ಜಪ್ತಿ ಮಾಡಲಾಗಿದೆ. ಜೊತೆಗೆ ₹17 ಲಕ್ಷ ನಗದು, 22 ಮೊಬೈಲ್‌ಗಳು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

