ಧಾರವಾಡ: ಕರ್ನಾಟಕ ರಾಜ್ಯ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ನವೆಂಬರ 14 ರಂದು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ನಡೆಸಲಿದ್ದು, ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದರು.
ಅವರು, ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ, ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯ ಪೂರ್ವಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.
ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳಲ್ಲಿನ ಕಳೆದ ಮೂರು ವರ್ಷಗಳಲ್ಲಿ ಸಾಮಾನ್ಯ ಕಾರ್ಯಕ್ರಮಗಳು ಮತ್ತು ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳಡಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳು, ವಿವಿಧ ಯೋಜನೆಗಳ ಕುರಿತು ಪ್ರಶ್ನಾವಳಿಗಳ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿಖರವಾದ ಮಾಹಿತಿಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಕಲ್ಯಾಣ ಸಮಿತಿಯ ಸಭೆಗೆ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ಸಮಿತಿಯು ಕೇಳುವ ಎಲ್ಲ ಮಾಹಿತಿಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸಮಿತಿಯ ಸಭೆ ನಡೆಸಲು ಸೂಕ್ತ ವ್ಯವಸ್ಥೆ ಮಾಡುವುದರ ಜೊತೆಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸ್ವಾಗತಿಸಲು ಅವಶ್ಯವಿರುವ ಎಲ್ಲಾ ರೀತಿಯ ಶಿμÁ್ಟಚಾರ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಯಾ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಇರುವ ಸೌಲಭ್ಯಗಳು ಯಾವವು, ಅನುದಾನ ಬಂದಿದ್ದು ಎಷ್ಟು ಹಾಗೂ ಬಳಕೆಯಾದ ಮತ್ತು ಉಳಿದಿರುವ ಅನುದಾನ ಮತ್ತು ಈ ಕುರಿತ ಅಂಕಿ ಅಂಶಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಇಟ್ಟುಕೊಂಡಿರಬೇಕು ಎಂದರು.
ಸುಳ್ಳು ಜಾತಿ ಸರ್ಟಿಪಿಕೇಟ್ ಪ್ರಕರಣಗಳು, ದಲಿತ ಸಮುದಾಯದವರ ಮೇಲೆ ಹಲ್ಲೆ ಪ್ರಕರಣಗಳ ಕುರಿತು ಮಾಹಿತಿ ಕೇಳುವದರಿಂದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸರಿಯಾದ ಮಾಹಿತಿ ಹೊಂದಿರಬೇಕು. ಸಮಿತಿ ಅಧ್ಯಕ್ಷರು, ಸದಸ್ಯರು ಕೇಳುವ ಎಲ್ಲ ಮಾಹಿತಿಯನ್ನು ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

