ಬೀದರ್ ಮೂಲದ ಕೂಲಿ ಕಾರ್ಮಿಕರು ತೆಲಂಗಾಣದ ಜಾಹಿರಾಬಾದ್ ಬಳಿ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮೆದಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶ್ರೀದೇವಿ, ರೇಖಾ, ಕವಿತಾ, ರೇಷ್ಮಾ, ದೇವದಾಸ್, ನಿಖಿತಾ ಸೇರಿದಂತೆ 7 ಮಂದಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಭೀಮನ ಅಮಾವಾಸ್ಯೆ ಹಿಂದಿನ ದಿನವೇ ಕುಟುಂಬಗಳಲ್ಲಿ ಆಘಾತ ಮೂಡಿಸಿದೆ. ಘಟನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ, ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವಂತೆ ಬೀದರ್ ಜಿಲ್ಲಾಡಳಿತಕ್ಕೂ ನಿರ್ದೇಶನ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

