ಬೆಂಗಳೂರು ಕೆ.ಆರ್.ಪುರದಲ್ಲಿ ಜಗಳ ಬಿಡಿಸಲು ತೆರಳಿದ್ದ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿ, ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ನಡೆದಿದೆ. ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ನಯನಾ ನೀಡಿದ ದೂರಿನ ಮೇರೆಗೆ ಹೇಮಂತ್ ರೆಡ್ಡಿ, ರಾಹುಲ್, ಹರ್ಷಿತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆ.12ರಂದು ಭಟ್ಟರಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್ ಉಂಟುಮಾಡಿ ಹೇಮಂತ್ ರೆಡ್ಡಿ ಜಗಳವಾಡುತ್ತಿದ್ದ. ಪಿಎಸ್‌ಐ ನಯನಾ ಜಗಳ ಬಿಡಿಸಲು ಮಧ್ಯಪ್ರವೇಶಿಸಿದಾಗ, ಆರೋಪಿ ಅವರ ಕೈ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಆತನ ಸಹಚರರು ಹಾಗೂ ಕುಟುಂಬಸ್ಥರು ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಪಿಎಸ್‌ಐ ಅವರ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ದೃಶ್ಯಗಳು ಅಧಿಕಾರಿಗಳ ಬಾಡಿವೋರ್ನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

