ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಆರೋಪಿಸಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ರಘು (36) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಪ್ರಮುಖ ಆರೋಪಿಗಳಾಗಿದ್ದಾರೆ. ಮೃತದೇಹ ಸಾಗಿಸಲು ಸಹಕರಿಸಿದ ಆರೋಪದಲ್ಲಿ ಉಬೇದುಲ್ಲಾ ಸ್ನೇಹಿತ ಸುರೇಶ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ರಘು ಹಾಗೂ ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿಗೆ ಕುಡಿತದ ಚಟವಿದ್ದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವೇಳೆ ಕಳೆದ 2–3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಈ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ, ಶೃತಿ ಹಾಗೂ ಉಬೇದುಲ್ಲಾ ಸೇರಿ ರಘುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ರಘು ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಶೃತಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ವಿವರಗಳು ಬಯಲಾಗಿದ್ದು, ಬಳಿಕ ಶೃತಿ, ಉಬೇದುಲ್ಲಾ ಹಾಗೂ ಸುರೇಶ್ ಅವರನ್ನು ಬಂಧಿಸಲಾಗಿದೆ. ಕೊಲೆ ಬಳಿಕ ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದ್ದು, ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

